ಜನಪದ ಸಾಹಿತ್ಯ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ಜನಪದ ಸಾಹಿತ್ಯ ಎಂದರೆ ಜನತೆಯ ಜೀವನದಲ್ಲಿ ಸಹಜವಾಗಿ ಉದಿಸುವ ಸಾಹಿತ್ಯ; ವಿದ್ಯೆ ಕಲಿತ ಜನ ಕವಿತೆ ಬರೆಯಬೇಕೆಂದು ಉದ್ದೇಶಪೂರ್ವಕ ನಿರ್ಮಿಸಿದ ಸಾಹಿತ್ಯ ಅಲ್ಲ. ಒಂದು ಅನುಭವವನ್ನು ಪಡೆದ ಚೇತನ ಆ ಅನುಭವವನ್ನು ಹೇಳಿಕೊಳ್ಳಲು ಬಯಸಿ ಅದಕ್ಕೆ ಮಾತಿನಲ್ಲಿ ರೂಪಕೊಟ್ಟಾಗ ಕಾವ್ಯ ಉದಿಸುತ್ತದೆ. ಅನುಭವ ಮಾನವ ಸಾಮಾನ್ಯವಾದ ಭಾಗ್ಯ, ವಿಧಿ; ಹೇಳಿಕೊಳ್ಳುವ ಪ್ರವೃತ್ತಿಯೂ ಮನುಜ ಕುಲಕ್ಕೆ ಸಾಮಾನ್ಯ. ಅದಕ್ಕೆ ಬೇಕಾದ ಮಾತೂ ಎಂಥವರಿಗೂ ಅಲ್ಪವೋ ಸ್ವಲ್ಪವೋ ಇದ್ದೆ ಇರುತ್ತದೆ. ಆದ್ದರಿಂದ ಎಂಥ ಅಲ್ಪಸಂಸ್ಕøತಿಯ ಜನತೆಗಳಲ್ಲಿಯೂ ಒಂದು ಮಟ್ಟದ ಸಾಹಿತ್ಯ ಅನಿವಾರ್ಯವಾಗಿ ಉದಿಸುತ್ತದೆ. ಎಂದಮೇಲೆ ಸಂಸ್ಕøತಿ ಬೆಳೆದಿರುವ ಜನತೆಯಲ್ಲಿ ಅದು ವಿಪುಲವಾಗಿಯೇ ಬೆಳೆಯಬೇಕು. ಕನ್ನಡ ಜನತೆ ಸಾವಿರ ವರ್ಷಕ್ಕೆ ಹೆಚ್ಚಿನ ಕಾಲಮಾನ ಸುಸಂಸ್ಕøತವಾದ ಜೀವನವನ್ನು ನಡೆಸಿದೆ. ವಿದ್ಯಾವಂತರು ಸುಸಂಸ್ಕøತರಾಗಿದ್ದಂತೆ ವಿದ್ಯೆಯ ಫಲದ ಪ್ರಸಾರದಿಂದ ಈ ನಾಡಿನ ಸಾಮಾನ್ಯ ಜನರೂ ಸಾಹಿತ್ಯದಲ್ಲಿ ಜಾಣರಾಗಿದ್ದರು. ತಮ್ಮ ಸಾಹಿತ್ಯದಲ್ಲಿ ದೊರೆತಿರುವ ಮೊಟ್ಟ ಮೊದಲ ಗ್ರಂಥವಾದ ಕವಿರಾಜಮಾರ್ಗದಲ್ಲಿ ಅದರ ಕರ್ತೃ ಜನದ ಈ ಜಾಣತನವನ್ನು ಹೊಗಳಿದ್ದಾನೆ. ಕನ್ನಡ ನಾಡ ಜನ ಹದನರಿತು ನುಡಿಯಲೂ ನುಡಿದುದನ್ನು ಆರಯಲೂ ಬಲ್ಲರು. ಇವರು ಸಹಜವಾಗಿಯೇ ಚದುರರು. ಕುರಿತು ಓದದೆಯೇ ಕಾವ್ಯ ಪ್ರಯೋಗ ಪರಿಣತಮತಿಗಳು. ಕುರಿತವರಲ್ಲದೆ ಇತರರೂ ತಮ್ಮ ತಮ್ಮ ನುಡಿಗಳಲ್ಲಿ ಜಾಣರು. ಈ ಹೊಗಳಿಕೆಯ ಮಾತಿನಲ್ಲಿ ಅತ್ಯುಕ್ತಿ ಸ್ವಲ್ಪ ಇರಬಹುದು. ಆದರೆ ಉಳಿದದ್ದು ವಾಸ್ತವಸ್ಥಿತಿಯನ್ನು ಸೂಚಿಸುವ ಮಾತು ಎನ್ನುವುದರಲ್ಲಿ ಸಂಶಯವಿಲ್ಲ. ಇಂಥ ಜನದಲ್ಲಿ ಜಾನಪದ ಎಂಬ ಸಹಜ ಸಾಹಿತ್ಯ ಹೇರಳವಾಗಿ ಬೆಳೆದಿರಬೇಕು. ರಾಷ್ಟ್ರದಗಲ ಹರಡಿರಬೇಕು. ಆದರೆ ಪೂರ್ವದ ಇಂಥ ಸಾಹಿತ್ಯ ಈಗ ನಮಗೆ ದೊರೆಯುತ್ತಿಲ್ಲ. ನಮ್ಮ ಪೂರ್ವಜರು ಬರೆಹಕ್ಕೆ ಇಳಿಸಿದ ಪಂಡಿತ ಸಾಹಿತ್ಯವೇ ಅದೆಷ್ಟೋ ಪಾಲು ಕೈಗೆ ಸಿಕ್ಕದೆ ನಷ್ಟವಾಗಿದೆ ಎನ್ನುವಲ್ಲಿ ಬರೆಹಕ್ಕೆ ಇಳಿಯದೆ ಜನರ ನಾಲಗೆಯಲ್ಲಿ ನಡೆಯುವಷ್ಟೇ ಭಾಗ್ಯ ನಡೆದ ಜನತಾ ಸಾಹಿತ್ಯ ದೊರೆಯುವುದು ಹೇಗೆ ಸಾಧ್ಯ? ಆದರೂ ಇಲ್ಲಿ ಒಂದು ತುಣುಕು, ಅಲ್ಲಿ ಒಂದು ಚೂರು, ಅದೆಂದಿನಿಂದಲೋ ಉಳಿದುಕೊಂಡು ಬಂದಿವೆ, ಅಲ್ಲಲ್ಲಿ ಕೇಳಿ ಬರುತ್ತಿವೆ. ನಮ್ಮ ನಾಡಿನ ಪಡುವಣ ಕಡಲ ಕರೆಯ ಅಗೇರು ಎಂಬ ಹೆಸರಿನ ಜನರಲ್ಲಿ ಮಂತ್ರಗಾತಿಯಾದವಳು ದೆವ್ವವನ್ನು ಬಿಡಿಸಲು ಕರ್ಕಶಧ್ವನಿಯಲ್ಲಿ ಒಂದು ರೀತಿಯ ಏಕತಾನದ ಗೀತವೊಂದನ್ನು ಉದ್ಗರಿಸುವುದುಂಟು. ಮಳೆ ಬರುವುದು ತಡವಾದರೆ ನಮ್ಮ ಗ್ರಾಮಗಳಲ್ಲಿ ಜೋಗಿತಿಯರು, ಹುಯ್ಯೊ ಹುಯ್ಯೊ ಮಳೆರಾಯ ಮಳೆರಾಯನ ಹೆಂಡಿರು ಮಕ್ಕಳತಾಯಿ, ಹುಯ್ಯೊ ಹುಯ್ಯೋ ಮಳೆರಾಯ ಎಂದು ಮಳೆಯ ದೇವರನ್ನು ಮಳೆ ಕೊಡೆಂದು ಬೇಡಿ ಹಾಡುತ್ತ ಬರುವುದುಂಟು. ಇದು ಸಂಸ್ಕøತ ಬಲ್ಲವರ ಪರ್ಜನ್ಯಜಪದ ಪ್ರಾಕೃತ ಮೂಲರೂಪ. ಬಹು ಪೂರ್ವದ ಕೃತಿ ಮರೆತುಹೋಗಿದೆಯಾದರೂ ಸುಮಾರು ಐದುನೂರು ವರ್ಷಗಳ ಈಚೆಗೆ ಆದದ್ದೆಂದು ಊಹಿಸಬಹುದಾದ ಜನಪದ ಸಾಹಿತ್ಯ ನಮ್ಮ ಜನರಲ್ಲಿ ಈಗಲೂ ಬಳಕೆಯಲ್ಲಿದೆ. ಆಂಗ್ಲಸಾಹಿತ್ಯವನ್ನು ಅಭ್ಯಾಸ ಮಾಡಿದ ಜಾಣರು ಆ ಸಾಹಿತ್ಯದಲ್ಲಿ ಜನಪದ ಗೀತಕ್ಕೆ ದೊರೆತಿರುವ ಗೌರವವನ್ನು ತಿಳಿದು ನಮ್ಮಲ್ಲಿ ಇಂಥ ಸಾಹಿತ್ಯ ಏನಿದೆ ಎಂದು ಈ ಶತಮಾನದಲ್ಲಿ ನೋಡತೊಡಗಿದರು. ಸದಾ ಎದುರಿಗಿರುವ ಈ ಸಾಹಿತ್ಯ, ಅಲಕ್ಷ್ಯ ಮಾಡಿದ್ದರಿಂದ ಕಾಣದೆ ಇದ್ದದ್ದು, ನೋಡತೊಡಗಿದ್ದೆ ತಡನಾಡ ತುಂಬ ಹೇರಳವಾಗಿ ಕಂಡಿತು. ನಲವತ್ತು ವರ್ಷದ ಹಿಂದೆ ಇದನ್ನು ಶೇಖರಿಸುವ ಕೆಲಸ ಆರಂಭವಾಯಿತು. ದಕ್ಷರಾದ ಸಾಹಿತ್ಯಪ್ರೇಮಿಗಳು ಶೇಖರಿಸಿ ಪ್ರಕಟಿಸಿರುವ ಹತ್ತಾರು ಸಂಗ್ರಹ ಗ್ರಂಥಗಳು ಈಗ ದೊರೆಯುತ್ತಿವೆ. ಇವು ಬಹುಶಃ ಪದ್ಯಗಳೇ ಆಗಿವೆ. ಜನಪದ ಕಥೆ, ಜನಪದ ನಾಟಕ ಉಂಟು. ಇವು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗಿ ಪ್ರಕಟವಾಗಿಲ್ಲ. ಪ್ರಕಟವಾಗಿರುವ ಪದ್ಯ ಸಂಗ್ರಹಗಳಲ್ಲಿ ಕಾಣುವ ಕೃತಿಯ ವೈವಿಧ್ಯವೇ ಒಂದು ಸೋಜಿಗ. ಗ್ರಾಮಗಳಲ್ಲಿ ಹೆಣ್ಣು ಮಕ್ಕಳು ಮುಂಜಾನೆ ಎದ್ದು ಕಾಳನ್ನು ಬೀಸುವ ವೇಳೆ ಹಾಡುವ ಪದಗಳು ಒಂದು ಗುಂಪು ; ಹೊಲದಲ್ಲಿ ದುಡಿಯುತ್ತ ಹಾಡುವ ಪದಗಳದು ಒಂದು ; ಮಗುವನ್ನು ತೊಟ್ಟಿಲಲ್ಲಿಟ್ಟು ಹಾಡುವ ಜೋಗುಳಗಳದು ಒಂದು ; ಮದುವೆ ಮಂಗಳ, ಹಬ್ಬ ಹುಣ್ಣಿಮೆಯಲ್ಲಿ ದೇವರೆದುರಲ್ಲಿ, ನೆಂಟರಿಷ್ಟರ ನೆರವಿಯಲ್ಲಿ ಹಾಡುವ ಹಾಡುಗಳು, ಚೌಪದಿಗಳು ಇತ್ಯಾದಿ ಒಂದು ಗುಂಪು ; ಕೊರವಿತಿ ಹಚ್ಚೆ ಚುಚ್ಚುತ್ತ ತನ್ನ ಸೂಜಿಯಿಂದ ಆಗುವ ಬೇನೆ ಮರೆಸಲೆಂದು ಹಾಡುವ ಹಾಡುಗಳದು ಒಂದು ; ಗ್ರಾಮದ ತರುಣರು ಗಾಡಿ ಹೊಡೆಯುತ್ತ, ನೀರೆತ್ತುತ್ತ ಹೇಳುವ ಹಾಡು, ಕೂಲಿಕಾರ ಜನ ಮರ ಕೊಯ್ಯುತ್ತ, ಬಂಡೆ ಸೀಳುತ್ತ ಹೇಳಿಕೊಳ್ಳುವುದು, ಹಬ್ಬ ಹುಣ್ಣಿಮೆಯ ಸಂತೋಷಕ್ಕೆಂದು ಗ್ರಾಮದ ಗಂಡುಮಕ್ಕಳು ಕಲಿಯುವ ನೃತ್ತಗೀತ ; ಜೀತದ ಜನ ಒಡೆಯನ ಎದುರು ಕುಣಿವಾಗ ಹೇಳುವ ಹಾಡು, ಗರಡಿಗಳ ತರುಣರ ಸ್ವಪ್ರತಿಷ್ಠೆಯ ಗೀತಗಳು, ಶಾಲೆಯ ಮಕ್ಕಳ ಕೋಲಾಟದ ಮಾನವಮಿ ಪದಗಳು ; ಗ್ರಾಮದ ಜನರ ಸಂತೋಷಕ್ಕೆ ಹಾಡುತ್ತ ಬರುವ ಜೋಗಿ, ಜೋಗಿತಿ ಇಂಥ ಜನರ ಕಥೆಯ ಹಾಡುಗಳು; ಮನೆತನದ ಚರಿತ್ರೆಯನ್ನು ಹೊಗಳುವ ಹೆಳವರ ಕಥೆಗಳು-ಇವೆಲ್ಲ ಈ ಸಾಹಿತ್ಯದ ಬೇರೆಬೇರೆ ತೆರ. ಇವಲ್ಲದೆ ನಗರಗಳಲ್ಲಿ ಸ್ಪರ್ಧೆಗಳಲ್ಲಿ ಬೆಳೆದಿರುವ ಒಂದು ತೆರನ ಗೀತ ಲಾವಣಿ ಇದೆ. ಇದು ಪ್ರಾಯಶಃ ವಿಸ್ತಾರವಾಗಿ ಬೆಳೆಸಿರುವ ಒಂದು ಕಥೆ. ಇದರಲ್ಲಿ ಎರಡು ಕ್ರಮ ; ಕಲ್ಗಿ ಮತ್ತು ತುರಾಯಿ (ನೋಡಿ- ಕಲ್ಗಿ---ತುರಾಯಿ). ಇವು ಮೂಲತಃ ಕಲಿಕೆ ತ್ವರಾ ಇರಬೇಕು. ಕಲಿಕೆ ಲಾವಣಿಕಾರ ತಾನು ಕಲಿತಿರುವ ಕೃತಿಗಳನ್ನು ಇನ್ನೂ ನನ್ನಲ್ಲಿ ಸರಕು ಉಂಟು ಎಂದು ರಾತ್ರಿಯೆಲ್ಲ ಹೇಳುತ್ತ ಹೋಗಬೇಕು. ತುರಾ ಲಾವಣಿಕಾರ ಸಭೆಯ ಹಿರಿಯರು ಆಗ ಏನನ್ನು ಹೇಳುತ್ತಾ ಹೋಗಬೇಕು. ತುರಾ ಲಾವಣಿಕಾರ ಸಭೆಯ ಹಿರಿಯರು ಆಗ ಏನನ್ನು ಬಯಸಿದರೆ ಆ ಸಂಗತಿಯನ್ನು ಕುರಿತು ಅಲ್ಲೇ ಸಂಪೂರ್ಣ ಆಶುಕವಿತ್ವ ಮಾಡಬೇಕು ಎಂದು ಅರ್ಥವಲ್ಲ. ತನ್ನ ವಿದ್ಯೆಯಲ್ಲಿ ಬರುವ ಎಲ್ಲ ಸಂಗತಿಗಳಲ್ಲೂ ಒಂದೆರಡು ಕೃತಿಯನ್ನು ಕಲಿತು ಅವನ್ನು ಒಪ್ಪಿಸಲು, ಒಪ್ಪಿಸುವಲ್ಲಿ ಅಲ್ಲಲ್ಲಿ ತನ್ನ ಮಾತನ್ನೇ ಎರಡನ್ನು ಸೇರಿಸಲು, ಅವನಿಗೆ ಯೋಗ್ಯತೆ ಇರಬೇಕು. ಕೊನೆಯದಾಗಿ ಈ ಸಾಹಿತ್ಯದಲ್ಲಿ ಬಹಳವೇನೂ ಕಲಿತಿರದಿದ್ದರೂ ಕಲಿತವರ ರೀತಿಯಲ್ಲಿ ಕಾವ್ಯವನ್ನು ರಚಿಸಿರುವ ಕವಿಗಳ ಕೈವಾಡವೂ ಉಂಟು. ಇದು ಕೆಲವು ವೇಳೆ ಬಹು ಚೆನ್ನಾಗಿಯೂ ಇರುತ್ತದೆ. ಯಕ್ಷಗಾನ ನಳಚರಿತ್ರೆ, ಭಾಗಾನಗರದ ಬಾಲೆಯ ಹರಕೆಯ ಹಾಡು, ಗೋವಿನ ಕಥೆ-ಇಂಥ ಕೃತಿಗಳು. ಕಾವ್ಯವೆಂದೇ ಬರೆದಿರುವ ಒಂದೆರಡು ಕೃತಿಗಳಲ್ಲಿ ಬಿಟ್ಟರೆ ಉಳಿದಂತೆ ಜನಪದ ಸಾಹಿತ್ಯದಲ್ಲಿ ಅದರ ಕರ್ತೃ ಯಾರು ಎಂಬ ಬಗ್ಗೆ ಯಾವ ಸೂಚನೆಯೂ ಇರುವುದಿಲ್ಲ. ನಿಜವಾದ ಯಾವ ಕವಿತೆಯೂ ಒಟ್ಟು ಜನತೆಯ ಸಂಸ್ಕøತಿಯ ಫಲ; ಒಬ್ಬ ಕವಿಯ ಕೈಯಲ್ಲಿ ರೂಪಗೊಳ್ಳತಕ್ಕದ್ದು. ಅದು ಅವನದು ಎಷ್ಟೋ ಅದಕ್ಕೂ ಹೆಚ್ಚಾಗಿ ಅವನ ಜನತೆಯ ಕೃತಿ. ಯಾರೋ ಒಬ್ಬರು ರಚಿಸಿ, ಹತ್ತುಜನ ಹಾಡಿ, ನೂರು ಜನ ಕೇಳಿ, ಹಾಡಿದ ನೂರು ಜನರ ಬಾಯಲ್ಲಿ ಅಷ್ಟಷ್ಟು ಮಾರ್ಪಟ್ಟು, ಈ ಸಾಹಿತ್ಯ ಕೊನೆಗೆ ಬಳಕೆಗೆ ಬಂದಿರುವ ರೂಪದಲ್ಲಿ, ಒಬ್ಬ ಇಬ್ಬರ ಕೃತಿ ಅಲ್ಲವೇ ಅಲ್ಲ. ಎಲ್ಲ ಜನತೆಯ ಕೃತಿ, ಎಂಬ ಸ್ಥಿತಿಯನ್ನು ಮುಟ್ಟುತ್ತದೆ. ಇದರ ಪರಿಣಾಮ, ಇದರಲ್ಲಿ ನಮಗೆ ಕೇಳುವುದು ಯಾವನೇ ಒಬ್ಬ ಕವಿಯ ಕಂಠ ಅಲ್ಲ. ಜನತೆಯದೆ ಕಂಠ ; ಒಬ್ಬ ಕವಿಯ ಬುದ್ಧಿಯ ಹೃದಯದ ನುಡಿಯಲ್ಲ ; ಜನತೆಯದೆ ಬುದ್ಧಿ, ಹೃದಯದ ನುಡಿ. ಒಂದನೆಯ ಮಹಾಯುದ್ಧದಲ್ಲಿ ಗೆಲವು ತರಲು ಸತ್ತ ಸಾಮಾನ್ಯ ಸೈನಿಕರು ಸಾವಿರಾರು ಜನ ಹೆಸರಿಲ್ಲದವರ ಸೇವೆಯ ಸ್ಮಾರಕವಾಗಿ ಆಜ್ಞಾತಯೋಧನಿಗೆ ಎಂದು ಒಂದು ಸ್ಮøತಿ ಸ್ತಂಭವನ್ನು ಜನಾಂಗಗಳು ನಿರ್ಮಿಸಿದುವು. ಈ ರೀತಿಯಲ್ಲಿ ಹೇಳುವುದಾದರೆ ಜನಪದ ಸಾಹಿತ್ಯದ ಕವಿ ಅಜ್ಞಾತಕವಿ. ವಾಸ್ತವದಲ್ಲಿಯೇ ಹಲವರ ಕೃತಿ. ಆದ್ದರಿಂದ ಈ ಕವಿತೆಯ ಭಾವನೆ ಭಾಷೆ, ಉಕ್ತಿಗಳು, ಜನತೆಯ ಭಾವನೆ, ಭಾಷೆ, ಉಕ್ತಿ ಆಗಿವೆ. ಜನತೆಯ ಭಾಷೆ, ಉಕ್ತಿ ಎಂದದ್ದರಿಂದ ಇದರ ಯೋಗ್ಯತೆ ಕಡಿಮೆಯಾಯಿತೋ ಎಂಬ ಶಂಕೆ ಅನಾವಶ್ಯಕ. ಇವನ್ನು ರಚಿಸಿದ ಜನ ಬರೆಹ ಬಾರದವರಿರಬಹುದು. ಅರಿವಿಲ್ಲದವರಲ್ಲ. ನೃಪತುಂಗ ಭೂಪಾಲನ ದಿನದ ಜನತೆ ಆಮೇಲೂ ಚದುರಾಗಿಯೇ ಬೆಳೆಯಿತು. ವೀರಶೈವ ವಚನಕಾರರು, ಹರಿದಾಸ ಕೀರ್ತನಕಾರರು, ಕುಮಾರವ್ಯಾಸ, ರತ್ನಾಕರ ವರ್ಣಿಯಂಥ ಷಟ್ಪದಿ ಸಾಂಗತ್ಯಕಾರರು, ಜನತೆಯ ಜೀವನದಲ್ಲಿ ಉದಿಸಿ ಜನತೆಗಾಗಿ ಹಾಡಿ ನುಡಿದು ಜನದ ಬುದ್ಧಿಯನ್ನು ಒಂದು ಹದಕ್ಕೆ ಮುಟ್ಟಿಸಿದರು. ಸರ್ವಜ್ಞನಂಥ ಮಹಾಪ್ರಾಜ್ಞ ಸಹವಾಸಿ ರಂಗನಾಥನಂತ ಒಬ್ಬ ವೇದಾಂತಿ, ವಿಶಾಲವಾದ ತಿಳಿವನ್ನೂ ಗೂಢವಾದ ರಹಸ್ಯಗಳನ್ನೂ ದಿನದ ಬಳಕೆಯ ಮಾತಿನಲ್ಲಿ ಎಲ್ಲ ಸ್ವತ್ತಾಗಿ ಮಾಡಿದರು. ತನ್ನಲ್ಲಿ ತನ್ನನ್ನು ತಿಳಿದು ಮೋಕ್ಷಗೊಳಿಸುವುದು ಹೇಗೆ ಎಂದಲ್ಲವೆ ವೇದಾಂತ ಕಲಿಸುವುದು? ಇದನ್ನು ಕನ್ನಡದಲ್ಲಿ ಕಲಿತರೆ ಹೇಗೆ? ಸಂಸ್ಕøತದಲ್ಲಿ ಕಲಿಯಬೇಕಾದದ್ದೇನು? ಹೀಗೆಂದು ಸಹವಾಸಿ ರಂಗನಾಥ ಅನುಭವಾಮೃತವನ್ನು ರಚಿಸಿದ. ಸಂಸ್ಕøತದಲ್ಲೇನು ಎಂಬ ಅವನ ಮಾತು ಹೆಮ್ಮೆಯ ಸೆಡೆನುಡಿಯಲ್ಲ. ಸರಿಯಾಗಿ ಗ್ರಹಿಸಿದೆವಾದರೆ ಇದು ಜನದ ಕರ್ತವ್ಯವನ್ನು ನಿರ್ದೇಶಿಸುತ್ತದೆ, ಕನ್ನಡನುಡಿಯ ಆತ್ಮಗೌರವ ಆತ್ಮವಿಶ್ವಾಸದ ಮಾತಾಗಿ ಕಾಣುತ್ತದೆ. ಇಂಥ ವತ್ಸಲ ಗುರುಪರಂಪರೆಯಿಂದ ಅರಿವನ್ನು ಪಡೆದ ಜನತೆ ಅದನ್ನು ಪಡೆಯುವ ಹೊತ್ತಿನಲ್ಲೇ ನುಡಿಯುವ ಪರಿಯನ್ನೂ ಕಲಿಸಿತು. ದಿಟದಲ್ಲಿ ನೋಡಿದರೆ ವಿದ್ಯಾವಂತ ಸಾಹಿತಿಯಲ್ಲಿ ಕೂಡ ಓದಿ ಕಲಿತ ಭಾಷೆಗಿಂತ ಕೇಳಿ ಕಲಿತ ಭಾಷೆಯ ಬಲ ಹೆಚ್ಚು. ನೂರು ಹೃದಯದಿಂದೊಗೆದರೂ ಈ ಸಾಹಿತ್ಯ ನೂರು ನಾಲಗೆ ನುಡಿಯುವಲ್ಲಿ ಒಂದು ಹೃದಯದ ನುಡಿ ಎಂಬ ಹದಕ್ಕೆ ಬರುತ್ತದೆ. ಆ ಹೃದಯ ಜನತೆಯ ಹೃದಯ. ನೂರು ಬುದ್ಧಿ ತಿದ್ದಿ ಇದರ ಅತ್ಯುತ್ತಮ ಕೃತಗಳಲ್ಲಿ ಕಾವ್ಯಲಕ್ಷಣ ಉದ್ಯಾನಲತೆಗಳನ್ನು ಸೋಲಿಸುವ ವನಲತೆಗಳಂತೆ ಪಾಂಡಿತ್ಯದ ಕೃತಿಗಳಲ್ಲಿ ಕಾಣದೊ ಎಂಬ ಎತ್ತರಕ್ಕೆ ಏರುತ್ತದೆ. ಇದರಲ್ಲಿ ಛಂದೋರೂಪ ಅನೇಕ ಇರುತ್ತವೆ. ಇವುಗಳಲ್ಲಿ ಕೆಲವು ಹೆಸರನ್ನು ಸಾಹಿತ್ಯಶಾಸ್ತ್ರ ಕಾಣದು. ಈ ಮಾತಿಗೆ ಉದಾಹರಣೆ ಸೊಬಗಿನ ಸೋನೆ. ಹೆಸರು ಹಾಗಿರಲಿ ಈ ಕೃತಿಗಳಲ್ಲಿ ಕಾಣುವ ಪ್ರಾಸದ, ಯತಿಯ, ಸ್ವರಸಾಮರಸ್ಯದ, ಹ್ರಸ್ವದೀರ್ಘವಿನ್ಯಾಸದ, ಮಿತ ಉಚಿತ ಉಕ್ತಿ ಭಂಗಿಯ ಚದುರು ಪಾಂಡಿತ್ಯದ ಕೃತಿಯ ಚದುರಿಗಿಂತ ಕಡಿಮೆಯದಲ್ಲ. ಈ ಕೃತಿ ಮಿತಿಯಲ್ಲಿ ಸಾಧಿಸುವ ಪರ್ಯಾಪ್ತಿ ಆಶ್ಚರ್ಯಕರವಾದದ್ದು. ಈ ಮಿತ ಶಬ್ದದರಿದ್ರನಾದ ಪಂಡಿತ ಕವಿಯ ಮಿತ ಅಲ್ಲ ; ಚಿಕ್ಕದಾಗಿ ಮಿನುಗುವ ಚುಕ್ಕಿಯ ಮಿತ. ಜನಪದ ಸಾಹಿತ್ಯದ ಸಾಮಗ್ರಿ ಜನಪದ ಜೀವನದ ಸಾವಿರ ವಿವರ. ದೇವರಲ್ಲಿ ಭಕ್ತಿ, ಭರನ್ಯಾಸ; ಊರನ್ನು ಕುರಿತ ಪ್ರೇಮ ; ತನ್ನ ಮನೆಯನ್ನು ಕುರಿತು ಹೆಮ್ಮೆ ; ನೆರೆಯವರನ್ನು ಕುರಿತ ಸನ್ಮಾನ ; ತಂದೆತಾಯಿ, ಅಣ್ಣತಮ್ಮ, ಅಕ್ಕತಂಗಿ, ಮಾವ ಅಳಿಯ ಎಂಬ ಗೌರವ, ಅಕ್ಕರೆ ; ಬಂಜೆಯ ಬೇಸರ, ತಾಯಾದವಳ ತೃಪ್ತಿ ; ಹೊಕ್ಕ ಮನೆಯ ಹೆಕ್ಕಳ, ತೌರುಮನೆಯ ಹಂಬಲ ; ಮದುವೆಯಾದ ಮಗಳು, ತಂಗಿ, ಹೋಗುವಾಗಣ ನೋವು ; ದಿನ ಎರಡು ದಿನ ಜೊತೆಗಿರಲು ಒಡಹುಟ್ಟು ಬರುತ್ತದೆಂಬ ಸಂತಸ ; ಬಡತನದ ಬೇನೆ, ಸಮೃದ್ಧಿಯ ಸಮಾಧಾನ ; ಗಂಡಹೆಂಡಿರು, ನಲ್ಲನಲ್ಲೆಯರ ಒಲವು ; ತಾರುಣ್ಯದ ಸಾಹಸ, ಕಾಳಗದ ಕುತೂಹಲ ; ಎಂದೋ ಎಲ್ಲೋ ಕಂಡ ಚರಿತ್ರೆ ; ತಂತ್ರದ ಸಿಕ್ಕು ; ದುಷ್ಟರ ಕುಟಿಲ, ಆಡಳಿತದ ಅನ್ಯಾಯ ; ಮೆಚ್ಚಿನ ಹೆಣ್ಣಿನ, ಉದಾರಿ ಒಡೆಯನ, ಧೀರ ಬಂಟನ ವರ್ಣನೆ ; ಅಪರೂಪವಾಗಿ ತಪ್ಪು ಒಲವಿನ, ದಿಕ್ಕುಗೆಟ್ಟ ಬದುಕಿನ ಚಿತ್ರ - ಹೀಗೆ ನೂರೆಂಟು ಬಗೆ. ಈ ಕವಿತೆಯ ವಿಸ್ತಾರ ಲೋಕದ ವಿಸ್ತಾರ. ಇದರಲ್ಲಿ ಸಹಜವಾದ ಎಲ್ಲ ಅಲಂಕಾರ ಉಂಟು. ಜನದ ಬಾಳಿನಿಂದ ನೇರವಾಗಿ ಬಂದ ಉಪಮೆ ರೂಪಕ ಉಂಟು. ಮಾತು ಕಡಿಮೆ ಅರ್ಥ ಹೆಚ್ಚು ಇರುವುದು ಉನ್ನತ ಸಾಹಿತ್ಯದ ಲಕ್ಷಣ. ಈ ಲಕ್ಷಣ ಜನಪದ ಸಾಹಿತ್ಯದಲ್ಲಿ ಕಾಣುತ್ತಲೇ ಇರುತ್ತದೆ. ಮುಖ್ಯವಾಗಿ ಇದರ ಪದ್ಧತಿ ಸೂಚನೆಯ ಪದ್ಧತಿ. ಕನ್ನಡದ ಗಾದೆಗಳಲ್ಲಿ ಹೇಗೋ ಹಾಗೆ ಅದರ ಜನಪದ ಸಾಹಿತ್ಯದಲ್ಲಿಯೂ ನಾಲ್ಕೆ ಮಾತಿನಲ್ಲಿ ಒಂದು ಕಥೆ ಅಡಗಿರುತ್ತದೆ. ಅದನ್ನು ಪೂರ್ಣವಾಗಿ ಕಲ್ಪಿಸಿಕೊಳ್ಳುವುದಕ್ಕೆ ಜಾಣು ಬೇಕು. ಹಾಗೆ ಕಲ್ಪಿಸಿಕೊಂಡರೆಯೇ ಅದರ ರಸ ದೊರೆಯುವುದು. ಈ ರಸವೋ ಇಲ್ಲಿ ಇಲ್ಲದ್ದು ಒಂದಿಲ್ಲ-ಎಂದರೂ ಶೃಂಗಾರ, ವೀರ, ಭಕ್ತಿ, ಹಾಸ್ಯ ಹೇರಳ, ಈ ಸಾಹಿತ್ಯದ ನಿರ್ಮಾಣ ಒಂದು ನಿರಂತರ ವ್ಯಾಪಾರ. ಯಾವುದೇ ಕಾರಣದಿಂದ ಪಾಂಡಿತ್ಯ ಕಾವ್ಯ ನಿಲ್ಲಬಹುದು, ಜನಪದ ಸಾಹಿತ್ಯ ಹೀಗೆ ನಿಲ್ಲುವುದಿಲ್ಲ. ಅದರ ಸಾಹಿತ್ಯ ನಿರ್ಮಾಣ ಕಾರ್ಯ ಜನತೆಯ ಉಸಿರಾಟದಂತೆ ಅವಿಚ್ಛಿನ್ನವಾಗಿ ನಡೆಯುತ್ತಿರುತ್ತದೆ. ಮೇಲೆ ಬತ್ತಿತೆಂದರೂ ಮರಳ ಅಡಿಯಲ್ಲಿ ಹರಿಯುತ್ತಿರುವ ಹೊಳೆಯಂತೆ ಇದರ ಅವ್ಯಕ್ತ ಆದರೂ ಅನವರತವಾದ ಅಸ್ತಿತ್ವ. ಪ್ರಕೃತಿಯ ಕವಿತೆಗೆ ಸಾವಿಲ್ಲ-ಎಂದ ಆಂಗ್ಲ ಕವಿಯ ಮಾತು ಇಲ್ಲಿ ಪೂರ್ಣವಾಗಿ ಹೊಂದುತ್ತದೆ. ಇದನ್ನು ಹಾಡುವುದರಲ್ಲಿ ರಾಗ ಬಹಳ ಇಲ್ಲ. ಆದರೆ ತಾನ ಅನೇಕ ಉಂಟು. ಜೊತೆಗೆ ಬಳಸುವ ಕೋಲು, ತಮ್ಮಟೆ, ಏಕತಾರು, ತಾಳ, ಡೋಲು, ಗುಮ್ಮಟೆ ಮುಂತಾದ ಹಲವಾರು ವಾದ್ಯ ಉಂಟು. ಜನಪದ ಸಾಹಿತ್ಯದ ಈ ಎಲ್ಲ ಪ್ರಶಂಸನವನ್ನೂ ಸಾಧಿಸಲು ನಿದರ್ಶನ ಕೊಡುವುದು ಕಷ್ಟ. ಆದರೂ ಕೆಲವು ಅಂಶವನ್ನಾದರೂ ತೋರುವ ಕೆಲವು ಉದಾಹರಣೆಯನ್ನು ಕೊಡಬಹುದು. ದೈವಭಕ್ತಿ, ಸತ್ಯನಿಷ್ಠೆ, ತಾಯ್ತನದ ವಾತ್ಸಲ್ಯ, ಮಗುವಿನ ದೈನ್ಯ, ನಾಡ ಚೆಲುವು, ಬಾಳಿನ ಸಮೃದ್ಧಿ, ಧರ್ಮದಲ್ಲಿ ನಂಬಿಕೆ, ಆ ನಂಬಿಕೆ ತರುವ ಸ್ಥೈರ್ಯ, ಇವಕ್ಕೆ ನಮ್ಮ ಗೋವಿನ ಕಥೆಯಂಥ ಕಿರಿಯ ಗಾತ್ರದ ಚೆನ್ನನುಡಿಯ ಇನ್ನೊಂದು ಉದಾಹರಣೆ ಇರಲಾರದು. ಮಹಾಭಾರತ ಮೂರು ಶ್ಲೋಕಗಳನ್ನು ಹೇಳಿರುವ ಒಂದು ಕಥೆಯನ್ನು ಜನಪದ ಕವಿ ಹೇಗೆ ಬೆಳೆಸಿದಾನೆ, ಹೇಗೆ ತನ್ನದಾಗಿ ಮಾಡಿಕೊಂಡಿದಾನೆ. ಮಹಾಭಾರತದ ಶಕುಂತಲೋಪಾಖ್ಯಾನದಿಂದ ಅಭಿಜ್ಞಾನ ಶಾಕುಂತಲವನ್ನು ಕಟ್ಟಿದ ಕವಿಯ ಚದುರು ಇದರ ಕವಿಯ ಚದುರಿಗಿಂತ ಹಿರಿದಲ್ಲ. ಕಾಳನ್ನು ಬೀಸಲು ಕಲ್ಲಿನೆದರು ಕುಳಿತ ಹೆಣ್ಣುಮಗಳು ಅದನ್ನು ಮುಟ್ಟಿ ಕೈಯನ್ನು ಕಣ್ಣಿಗೆ ಒತ್ತಿಕೊಂಡು ಕೈ ಮುಗಿದು, ದೇವರೇ ಕಾಳು ಬೀಸಲು ಕುಳಿತಿದೇನೆ, ಈ ಕೆಲಸವನ್ನು ಸುಮುಖವಾಗಿ ನೀನು ನಡೆಸಿಕೊಡಬೇಕು, ಇದನ್ನು ಮಾಡುವುದು ನಾನು ಎಂದು ನಾನು ತಿಳಿದಿಲ್ಲ, ಎನ್ನುತ್ತಾಳೆ. ಲೋಕದ ವ್ಯವಹಾರದಲ್ಲಿ ಇದಕ್ಕಿಂತ ಬಹುಮುಖ್ಯವಾದದ್ದನ್ನು ನಡೆಸಹೊರಡುವ ಹಿರಿಯ ಜನ ಇಂಥ ಮಾತನ್ನು ಆಡಿಕೊಂಡು ಕೆಲಸದಲ್ಲಿ ತೊಡಗಿದರೇ ಅದೆಷ್ಟು ಶುಭ ಆದೀತೋ! ಕಷ್ಟಕ್ಕೆ ಸಿಕ್ಕಿದ ಮನೆಯ ಅಥವಾ ಕಷ್ಟಕ್ಕೆ ಸಿಕ್ಕಿದ ಇಷ್ಟರನ್ನು ನೋಡಿದ, ತಾಯಿ ಹಿರಿಯರ ಚರಿತ್ರೆಯನ್ನೂ ನೆನೆಯುತ್ತಾಳೆ. ತನ್ನ ಕಷ್ಟವನ್ನು ಸಹಿಸುವ ಮನಸ್ಸನ್ನು ಗಳಿಸುತ್ತಾಳೆ. ಇಲ್ಲ ತರಿಸುತ್ತಾಳೆ. ಜನಕರಾಯನ ಮಗಳು ವನಕೆ ತೊಟ್ಟಿಲ ಕಟ್ಟಿ ಕುಶಲವರವನಿಟ್ಟು ತೂಗ್ಯಾಳೋ ಸೀತಾದೇವಿ ನಗುತ ವನವಾಸ ಮಾಡ್ಯಾಳೊ. ಈ ಮಾತುಗಳಲ್ಲಿ ಎಷ್ಟು ಅರ್ಥ. ರಾಜನ ಮಗಳು; ಮಕ್ಕಳನ್ನು ಪಡೆದು ವನಕ್ಕೆ ತೊಟ್ಟಿಲ ಕಟ್ಟಿದಳು-ಅರಮನೆಯಲ್ಲಲ್ಲ, ಗುಡಿಸಲಲ್ಲಿ. ಒಂದು ಗೊತ್ತಾದ ಮರಕ್ಕೂ ಅಲ್ಲ. ಹೀಗಿದ್ದೂ ರಾಜಕುಮಾರಿ ವನವಾಸದ ದಿನದಲ್ಲಿ ನಗುತ ಇದ್ದಳು. ಮಕ್ಕಳನ್ನು ಹಡೆದವ್ವ ಕೆಟ್ಟೆನೆಂದೆನಬೇಡ, ಬಡತನ ನನಗಿರಲಿ, ಬಹಳ ಮಕ್ಕಳಿರಲಿ, ಮೇಲೆ ಗುರುವಿನ ದಯ ಇರಲಿ, ನನ ಗುರುವೇ ಬಡತನದ ಚಿಂತೆ ನಿನಗಿರಲಿ, ಮಕ್ಕಳು ಬೇಕು ಎಂಬಷ್ಟೆ ತೀವ್ರವಾಗಿ ಬಂಜೆತನ ಬೇಡ ಎಂಬ ಉದ್ಗಾರ ಕೇಳಿಬರುತ್ತದೆ. ಬಂಜೆಂಬ ಶಬ್ದ ಹೊರಲಾರೆ, ಬಂಜೆಯ ಮನೆ ಮುಂದೆ ಬಂಗಾರದ ಒರಳ ಕಲ್ಲು. ಪ್ರಯೋಜನವೇನು? ಇದ್ದೂ ಮಕ್ಕಳನ್ನು ಹೆತ್ತವಳ ನೋವೂ ದಿಟವೇ. ಹೆಣ್ಣನ್ನು ಹೆತ್ತಳು. ಬೆಳೆದ ದಿನ ಅದನ್ನು ಬೇರೆಯವರ ಪಾಲು ಮಾಡಬೇಕು. ಇದು ತಾಯಿಗೂ ಇಷ್ಟವಿಲ್ಲ. ಮಗ, ಆ ಹುಡುಗಿಯ ಅಣ್ಣನಿಗೂ ಇಷ್ಟ ಇಲ್ಲ. ಅವನು ತಂಗಿಗೆ ಗಂಡಾಗಿದ್ದರೆ ಚೆನ್ನ ಇತ್ತು . ಸಮಾಧಾನವಾಗಿ ಆಸ್ತಿಪಾಲು ಕೊಡುತ್ತಿದ್ದೆ, ಎನ್ನುತ್ತಾನೆ. ಅವಳಿಗೂ ಈ ಹೋಗುವುದೆನ್ನುವುದು ಆಗ ಇಷ್ಟವಿಲ್ಲ. ತಾವರೆಯ ಗಿಡ ಹುಟ್ಟಿ ದೇವರಿಗೆ ನೆರಳಾಯ್ತು ನಾ ಹುಟ್ಟಿ ಮನೆಗೆ ಎರವಾದೆ. ಆದರೆ ಗಂಡನ ಮನೆಗೆ ಹೋದ ಮೇಲೆ ಅಲ್ಲೇ ಹೊಂದಿಕೊಳ್ಳುತ್ತಾಳೆ. ಆದರೂ ತಾಯ ಹಂಬಲು ಉಂಟು. ಅವರು ಪುಣ್ಯವಂತರು, ತನ್ನನ್ನು ನೆನೆಯುತ್ತಿದ್ದರೆ ಎನ್ನುತ್ತಾಳೆ. ತನ್ನ ಊರಿನಲ್ಲಿ ಒಳ್ಳೆಯ ಬೋರೇಹಣ್ಣು ದೊರೆಯುತ್ತವೆ. ಅವಳು ತೌರಲ್ಲಿರುವ ಬಸಿರಾಗಿರುವ ತನ್ನ ಗೆಳತಿಗೆಂದು ಅದನ್ನು ಕೊಂಡು ಕಳುಹಿಸುತ್ತಾಳೆ. ದಿನ ಕಳೆದು ಅವಳನ್ನು ತೌರಿಗೆ ಕರೆದುಕೊಂಡು ಹೋಗಲು ಅಮ್ಮ ಬರುತ್ತಾಳೆ. ಗಂಡ ಒಳ್ಳೆಯವನು. ಬಿಟ್ಟು ಹೋಗಲು ಇಷ್ಟವಿಲ್ಲ. ಹಚ್ಚಡದ ಪದರಾಗೆ ಅಚ್ಚ ಮಲ್ಲಿಗೆ ಹೂವು ಬಿಚ್ಚಿ ನನ ಮೇಲೆ ಚೆಲ್ಲುವಂತ ಪುರುಷನ ಬಿಟ್ಹೆಂಗೆ ಬರಲಿ ಹಡೆದವ್ವ? ಎಂಥ ಅರ್ಥಕ್ಕೆ ಎಂಥ ಶಬ್ದ. ಹೊಸ ಸಾಹಿತ್ಯ ಹೇಳುವವರು ಅಳುಕುವ ರೀತಿ ಬಿಚ್ಚಿ ಹೇಳುವ ಸಂಗತಿಯನ್ನು ಇದು ಎಷ್ಟು ಗಂಭೀರವಾಗಿ, ಆದರೂ ಸ್ಪಷ್ಟವಾಗಿ ವಿವರಿಸುತ್ತದೆ. ಇದು ಹುಡುಗಿಯೇ ಹೇಳುವ ಮಾತು ಎಂದರೆ ಅವಳ ಒಲವಿನ ಆಳವನ್ನು ತಿಳಿಸುತ್ತದೆ.; ಅವಳ ಗೆಳತಿ ಅವಳಿಗೆ ಆರೋಪಿಸಿದ್ದೆಂದರೆ ಹಾಸ್ಯವಾಗುತ್ತದೆ. ಕರೆಯಬಂದಿರುವ ಅವ್ವನೊಂದಿಗೆ ಹೊರಡಲು ತಡೆಯುತ್ತಿರುವ ಗೆಳತಿ ತಡೆಯುತ್ತಿದ್ದಾಳೆ ಏಕೆ? ಇವಳು ಕಾರಣ ಹೇಳುತ್ತಾಳೆ. ತರುಣಿ ತಾಯಾಗುತ್ತಾಳೆ. ಯಾಕಳುವೆ ಎಲೆ ರಂಗ ಬೇಕಾದ್ದು ನಿನಗಿದೆ ನಾಕೆಮ್ಮೆ ಕರೆದ ನೊರೆಹಾಲು ಸಕ್ಕರೆ ನೀ ಕೇಳಿದಾಗ ಕೊಡುವೆನು. ಹುಡುಗ ಬೆಳೆಯುತ್ತಾನೆ. ಆಟಕ್ಕೆ ಹೊರಡತ್ತಾನೆ. ಆಡಿ ಬಾ ನನ ಕಂದ ಅಂಗಾಲು ತೊಳೆದೇನು ; ತೆಂಗಿನಕಾಯಿ ತಿಳಿನೀರ ತಕ್ಕೊಂಡು ಬಂಗಾರ ಮೋರೆ (ಪಾದ) ತೋಳೆದೇನು. ಏನು ಅಕ್ಕರೆ ಏನು ಹೆಕ್ಕಳ. ಮಗು ಕೋಪದಿಂದ ಅಳುತ್ತದೆ. ಅಳುವ ಕಂದನ ತುಟಿಯು ಹವಳದ ಕುಡಿಹಂಗೆ ಕುಡಿಹುಬ್ಬು ಬೇವಿನಸಳಂಗೆ ಕಣ್ಣೋಟ ಶಿವನ ಕೈ ಅಲಗು ಹೊಳೆದಂಗೆ, ಗಂಡು ಮಗುವನ್ನು ಹಡೆದ ತಾಯಿಗೆ ಮಡಿಲ ತುಂಬುವಂತೆ ಅರಿವೇ ಸೊಪ್ಪು ದೊರೆತಷ್ಟು ಸಂತೋಷ. ಈ ಮಾತಿನ ಸಮೃದ್ಧಿಯ ಕಲ್ಪನೆ ಧನವಂತರ ಕರುಳನ್ನು ಹಿಂಡಬೇಕು. ಈ ಉಪಮಾನಗಳ ಸೊಗಸು ಜನಪದ ಸಾಹಿತ್ಯಕ್ಕೆ ಮೀಸಲಷ್ಟೇ ಅಲ್ಲ. ಮುರಿಯದ ಮೀಸಲು. ನಿಷ್ಕಲ್ಮಷವಾದ ಇಂಥ ಸಮಾಜ ವಿಜ್ಞಾನ, ಸೌಂದರ್ಯ ಜ್ಞಾನಕ್ಕೆ ಸುಂದರ ಶಬ್ದಗಳನ್ನು ಅಳವಡಿಸುವ ಈ ಚದುರು ಜನಪದ ಸಾಹಿತ್ಯದಲ್ಲಿ ಹೆಜ್ಜೆಹೆಜ್ಜೆಗೂ ಕಾಣುತ್ತದೆ. ಆ ಸೌಂದರ್ಯ ಜ್ಞಾನವೋ ಸರ್ವತೋಮುಖವಾದದ್ದು. ಒಂದು ಮುಖದ ಉದಾಹರಣೆಯಾಗಿ ಒಂದು ಪದ್ಯವನ್ನು ಹೇಳಬಹುದು. ಬೆಳ್ಳಾನೆ ಬೆಳಗಾಗಿ ಬೆಳ್ಳಿ ಮೂಡಲ ಆಗಿ ಒಳ್ಳೊಳ್ಳೆ ಮೀನ ಗರಿಕೆದರಿ ಆಡ್ಯಾವೆ ಗರತಿ ಗಂಗವ್ವನ ಉಡಿಯಾಗೆ. ಒಂದು ಹಳ್ಳಿಯಲ್ಲಿ ವಾಸ ಮಾಡುತ್ತ ಮುಂಜಾನೆ ಎದ್ದು ತಿಳಿನೀರ ಊರ ಕೊಳದೆಡೆ ಹೋದವರಿಗೆ ಮಾತ್ರ ಈ ವರ್ಣನೆ ಎಷ್ಟು ಚೆನ್ನ ಎಂದು ತಿಳಿಯಲು ಸಾಧ್ಯ. ಆ ಬೆಟ್ಟ ಈ ಬೆಟ್ಟವೋ ನಂಜುಂಡ ನಂದ್ಯಾಲಗಿರಿ ಬೆಟ್ಟವೋ ನಂದ್ಯಾಲಗಿರಿ ಬೆಟ್ಟವೋ ನಂಜುಂಡದಾಸಾಳಗಿಡ ಹುಟ್ಟಿತೋ-ಎಂಬ ಸಾಲುಗಳ ಸ್ವರ ಸೌಂದರ್ಯ ಜ್ಞಾನ ಅಬ್ಬರಿಸಿ ಗಂಗೆ ಹರಿದ್ವಾಳ, ಹೆಸರೊಂದು ಮೊಸರ ಬಾನ ನಮ್ಮವ್ವ ರಸತಾಳೆ ರಸತಾಳೆ ಹಾಲು ಜೇನ ಎಂಬ ಮಾತುಗಳಲ್ಲಿಯು ಶಬ್ದೌಚಿತ್ಯಜ್ಞಾನ ಈ ಕವಿತೆ ಮುಟ್ಟುವ ಮಟ್ಟಕ್ಕೆ ನಿದರ್ಶನ. ಜನಪದ ಸಾಹಿತ್ಯ ಈಗಲೂ ಸೃಷ್ಟಿ ಆಗುತ್ತಿದೆ. ಹೊಸ ತೆರನ ಬಾಳುವೆ ಅದರ ಭಾವನೆಗಳನ್ನು ಹೊಸತು ಮಾಡಿದೆ. ಇದಕ್ಕೆ ಹಾಗೆಯೇ ಈ ಸಾಹಿತ್ಯದ ಹಾಸ್ಯಕ್ಕೆ, ಉದಾಹರಣೆಯಾಗಿ ಇತ್ತಿಚೀನ ಷಟ್ಪದೀ ಆಭಾಸ ಪಂಕ್ತಿತ್ರಯವನ್ನು ಕೊಡಬಹುದು. ದಾರವಿಲ್ಲದ ಹಾರವಯ್ಯನ, ಲಿಂಗವಿಲ್ಲದ ಜಂಗಮಯ್ಯನ, ದಾಡಿಯಿಲ್ಲದ ಸಾಬರಯ್ಯನ ನಂಬಬೇಡೆಂದ, ಇಂಥ ಇನ್ನೊಂದು ಉದಾಹರಣೆಯ ಉರುಟಣೆಯಲ್ಲಿ ಹೆಣ್ಣು ಗಂಡಿಗೆ ಹೇಳುವ ಈ ಮಾತು ; ಕೊರಳ ಮೇಲೆ ಓಲಾಡುವ ಟೈ ಕೈಯಲ್ನೋಡಿದ್ರೆ ಪೈಸಾ ನೈ. ಜನಕರಾಯನ ಮಗಳಿಂದ ಈ ಟೈ ಮಾತು ಬಹು ದೂರ ಬಂದಿದೆ ಎನ್ನಿಸಬಹುದು. ಬಂದಿದೆ ದಿಟ ; ಆದರೆ ಅದರ ಕಾರಣ ಜೀವನ ಹಾಗೆ ಬಂದಿದೆ ಎನ್ನುವುದು. ಇದೇ ಆ ಸಾಹಿತ್ಯದ ಜೀವತಂತು. ಜನ ಎಂತು ಇದು ಅಂತು; ಬಾಳೆಂತು ಇದು ಅಂತು. ಇದರಿಂದಲೇ ಸ್ಪಷ್ಟವಾಗುವ ಇನ್ನೊಂದು ವಿವರ-ಇದನ್ನು ಬರೆಯುವವರೆಲ್ಲ ಅವಿದ್ಯಾವಂತರಲ್ಲ ಎನ್ನುವುದು. ಬೆಳ್ಳಾವಿ ಸೋಮಪ್ಪನ ಜಾತ್ರೆಯನ್ನು ವರ್ಣಿಸಿ ಹೊಸ ಒಂದು ಲಾವಣಿ ಈ ಇಪ್ಪತ್ತು ವರ್ಷಗಳಲ್ಲಿ ಪ್ರಸಾರಕ್ಕೆ ಬಂತು. ಇದನ್ನು ಬರೆದವರು ಒಳ್ಳೆಯ ಪಂಡಿತರಾಗಿದ್ದ ಹೊಸಕಾಲದ ನಮ್ಮ ನಾಟಕಕಾರರೊಬ್ಬರು. ಜನ ಜೀವನದ ವಿವರಗಳನ್ನು ತಿಳಿಸಬೇಕೆನ್ನುವರಷ್ಟೇ ಅಲ್ಲ ಜೀವನ ಸಾಹಿತ್ಯವನ್ನು ನಿರ್ಮಿಸಬಯಸುವವರು ಕೂಡ ಪಂಪ ರನ್ನ ಹರಿಹರ ಕುಮಾರವ್ಯಾಸರ ಕೃತಿಗಳನ್ನು ಅಭ್ಯಾಸ ಮಾಡುವಂತೆ ಈ ಸಾಹಿತ್ಯವನ್ನು ಸಾವಧಾನವಾಗಿ ಅಭ್ಯಾಸ ಮಾಡಬೇಕು. ಇದರ ಶಬ್ದಭಂಡಾರ, ಉಕ್ತಿಚಾತುರ್ಯ, ವರ್ಣನಕ್ರಮ, ವಾಕ್ಸಂಯಮ ಮುಂದೆ ಬರುವ ಸಾಹಿತ್ಯ ಕೃತಿಗಳಿಗೆ ಪ್ರೇರಕ ಆಗಬಹುದು, ಮೇಲ್ಪಂಕ್ತಿ ಆಗಬಹುದು.			(ಎಂ.ವಿ.ಐ)

	ಪರಂಪರಾಗತವಾಗಿ ಬಾಯಿಂದ ಬಾಯಿಗೆ ಬಂದ ಶಾಬ್ದಿಕ ಅಭಿವ್ಯಕ್ತಿಯನ್ನೆ ಜನಪದ ಸಾಹಿತ್ಯ ಎಂದು ಕರೆಯುವುದು ಸರಳವೂ ಸುಂದರವೂ ಆದ ಈ ಸಾಹಿತ್ಯ ಶಿಷ್ಟ ಸಾಹಿತ್ಯಕ್ಕಿಂತ ಬೇರೆಯಾದುದು. ಶಿಷ್ಟಸಾಹಿತ್ಯ ವ್ಯಕ್ತಿಯೊಬ್ಬನಿಂದ ರಚಿತವಾಗಿ ಬರವಣಿಗೆಯ ಮೂಲಕ ಉಳಿಯುವಂಥದು. ಕಾಲದ ಮೂಲಕ ಯಾವುದೇ ವ್ಯತ್ಯಾಸಕ್ಕೆ ಗುರಿಯಾಗದಿರುವಂಥದು. ಆಯಾ ಕಾಲದ ಸಾಮಾಜಿಕ ಪ್ರವೃತ್ತಿಗಳಿಗೆ ಮತ್ತು ಪರಿವರ್ತನೆಗಳಿಗೆ ಶಿಷ್ಟಸಾಹಿತ್ಯ ನಾಲಗೆಯಾಗುತ್ತದೆ. ಆದ್ದರಿಂದ ಇದಕ್ಕೆ ಇತಿಹಾಸವೊಂದನ್ನು ರೂಪಿಸಲು ಸಾಧ್ಯವಾಗುತ್ತದೆ. ಆದರೆ ಜನಪದ ಸಾಹಿತ್ಯ ಮೂಲತಃ ವ್ಯಕ್ತಿಯೊಬ್ಬರ ಸೃಷ್ಠಿಯಾದರೂ ಬೆಳವಣಿಗೆಯಲ್ಲಿ ಸಾಮೂಹಿಕವಾದುದು. ಆದ್ದರಿಂದ ಯಾರೊಬ್ಬರ ಕರ್ತೃತ್ವದ ಅಧಿಕಾರವನ್ನೂ ಇದರ ಮೇಲೆ ಸ್ಥಾಪಿಸಲಾಗುವುದಿಲ್ಲ. ಇದು ಕಂಠಸ್ಥ ಸಂಪ್ರದಾಯದ್ದಾದ್ದರಿಂದ ತಲೆಮಾರುಗಳ ಮೂಲಕ ಹರಿಯುವಾಗ ಅನೇಕ ರೂಪಾಂತರಗಳಿಗೆ ಗುರಿಯಾಗುವುದು ಸಹಜವಾಗುತ್ತದೆ. ಇದರಲ್ಲಿ ಸಾಮಾಜಿಕ ಸ್ಥಿತ್ಯಂತರಗಳು ಪ್ರತಿಫಲಿಸದಿರುವುದರಿಂದ, ಇತಿಹಾಸವನ್ನು ಹೇಳಲು ಕಷ್ಟವಾಗುತ್ತದೆ. ಜನಪದ ಮತ್ತು ಶಿಷ್ಟಸಾಹಿತ್ಯಗಳಿಗೆ ವ್ಯತ್ಯಾವಿರುವಂತೆ, ಸಂಬಂಧವೂ ಇದೆ. ಶಿಷ್ಟಸಾಹಿತ್ಯಕ್ಕೆ ಜನಪದ ಸಾಹಿತ್ಯವೇ ಮೂಲ, ಪ್ರೇರಕ ಶಕ್ತಿ. ಜನವಾಣಿ ಬೇರು, ಕವಿವಾಣಿ ಹೂವು ಎಂದು ಬಿಎಂಶ್ರೀ ಹೇಳಿದ್ದು ಈ ಅರ್ಥದಲ್ಲಿಯೇ. ಜನಪದ ಮತ್ತು ಶಿಷ್ಟ ಸಾಹಿತ್ಯಗಳೆರಡೂ ಅಕ್ಕಪಕ್ಕದಲ್ಲಿ ಗಂಗೆಯಮುನೆಯಂತೆ ಹರಿದಿದೆ. ಪ್ರವಾಹ ಬಂದಾಗ ಒಂದರ ನೀರು ಮತ್ತೊಂದಕ್ಕೆ ತುಳುಕುವಂತೆ, ಜನಪದ ಮತ್ತು ಶಿಷ್ಟಸಾಹಿತ್ಯಗಳೆರಡೂ ಪರಸ್ಪರ ತುಳುಕಿವೆ, ಬೆರತಿವೆ.

ಜನಪದ ಸಾಹಿತ್ಯದ ಮೂಲಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟವಾಗಿ ಏನನ್ನೂ ಹೇಳಲಾಗುವುದಿಲ್ಲ. ಇದರ ರಚನಕಾರರೆಲ್ಲ ಇಂದು ಅನಾಮಧೇಯರಾಗಿದ್ದಾರೆ. ಇದರಲ್ಲಿ ವ್ಯಕ್ತಿ ಪಾತ್ರವಹಿಸಿದರೂ ಸಮೂಹದ ಒತ್ತೇ ಹೆಚ್ಚಿನದು. ಇದು ಯಾವುದೋ ಒಂದು ಹಂತದ ಸೃಷ್ಟಿಯಾಗಿದ್ದು, ಅದು ನಾಗರಿಕತೆಯ ಪೂರ್ವದ್ದಾಗಿರಬೇಕೆಂದು ಅಭಿಪ್ರಾಯಪಡಲಾಗಿದೆ. ಇತ್ತೀಚಿನ ರಚನೆಗಳು ಇರುವುವಾದರೂ ಇವು ಆಗಲೆ ಇದ್ದ ಮೂಲಕಲ್ಪನೆಗಳ ಮೇಲೆ ಪುನಃ ಸೃಷ್ಟಿಗೊಂಡವುಗಳೆಂದು ಹೇಳುತ್ತಾರೆ. ಇಂದು ಜನಪದ ಸಾಹಿತ್ಯ ಎಲ್ಲರಲ್ಲಿಯೂ ಹರಡಿಕೊಂಡಿದ್ದರೂ ಈಗ ಅದನ್ನು ಹೇಳಿಕೊಡುವವರೆಲ್ಲ ಕೇವಲ ನಿರೂಪಕರೆಂಬುದನ್ನು ಮರೆಯಬಾರದು. ವಾಸ್ತವವಾಗಿ ಇದರ ಸೃಷ್ಟಿಕ್ರಿಯೆ ಕೆಲವು ಪ್ರತಿಭಾವಂತರಿಂದ ಆದುದು. ಅದು ಸಮೂಹದ ಮಡಿಲಿಗೆ ಬಂದಕೂಡಲೆ ಆ ಕರ್ತಾರರು ಮರೆತು ಹೋದರು ; ಸಾಹಿತ್ಯ ಸಮೂಹದ್ದಾಯಿತು. ಕೆಲವು ವೇಳೆ ಹಳೆಯ ರಚನಾ ಮಾದರಿಗಳ ಮೇಲೆ ಸಾದೃಶ್ಯ ರಚನೆಗಳು ಕಂಡುಬರುವ ಸಾಧ್ಯತೆ ಇರುತ್ತದೆ. ಇಂಥ ಸಂದರ್ಭಗಳಲ್ಲಿ ಪ್ರಾಚೀನ ರಚನೆಗಳಿಗೆ ನಾವು ಕೊಡುವ ಸಾಮಾಜಿಕ ಹಿನ್ನೆಲೆಯನ್ನು, ಆಮೇಲಿನ ಈ ಸದೃಶ ರಚನೆಗಳಿಗೆ ಕೊಡಲಾಗುವುದಿಲ್ಲ.
ಜನಪದ ಸಾಹಿತ್ಯದ ರೂಪ ಕೂಡ ಸಾಂಪ್ರದಾಯಿಕವಾದುದು. ಶಿಷ್ಟ ಸಾಹಿತ್ಯದ ಸೂಕ್ಷ್ಮತಂತ್ರಗಳು ಇದರಲ್ಲಿ ಕಂಡುಬರದಿದ್ದರೂ ತನ್ನದೇ ಆದ ಕೆಲವು ಸರಳ ನಿಯಮಗಳನ್ನಿದು ಹೊಂದಿರುತ್ತದೆ. ಪದ್ಯಗಳ ಸಾಲು, ಪಲ್ಲವಿ, ಅನು-ಪಲ್ಲವಿ, ಮುಟ್ಟುಗಳು, ಸೂತ್ರಬದ್ಧಕಥನ ವಿತರಣೆ, ಗಾದೆಯ ಸಮತೋಲನ ಒಗಟಿನ ಬಗೆಯದಾಗಿ ಕಾಣಿಸಿಕೊಳ್ಳುತ್ತದೆ. ಇವುಗಳಲ್ಲಿ ಮೂಲತಃ ಒರಟುತನವಿರುವಂತೆ ಭಾಸವಾದರೂ ಪರಿಷ್ಕಾರಗೊಂಡವುಗಳಂತೆ ತೋರುತ್ತದೆ. ಹೀಗಾಗಿ ನಿಯಮಗಳನ್ನು ಹಾಕಿಯೂ ಅದನ್ನು ಮೀರುವ ಪ್ರವೃತ್ತಿಯೊಂದು ಈ ಎಲ್ಲದರ ಒಡಲನ್ನೂ ನೆಯ್ದಾಳಿದೆ.
ವಾಹಕತ್ವ ಜನಪದ ಸಾಹಿತ್ಯದ ಮತ್ತೊಂದು ಲಕ್ಷಣ. ತಲೆಮಾರಿನಿಂದ ತಲೆಮಾರಿಗೆ ಬಾಯಿಂದ ಬಾಯಿಗೆ ಸಾಹಿತ್ಯ ಸಾಗಿಬರುವುದೇ ಇದು. ಜನಪದ ಸಾಹಿತ್ಯದ ಪ್ರತಿಯೊಂದು ಭಾಗವೂ ಮತ್ತೆ ಮತ್ತೆ ಹೇಳಿಸಿಕೊಳ್ಳುತ್ತ, ಅನುಷ್ಠಾನಕ್ಕೆ ಬರುತ್ತ ತಲೆಮಾರುಗಳ ಮೂಲಕ ಹರಿಯುವುದರಿಂದ ಪ್ರತಿಸಾರಿಯೂ ವ್ಯತ್ಯಾಸ ಅಥವಾ ಪರಿವರ್ತನೆ ಇರುತ್ತದೆ. ಹೊಸ ಅನ್ವೇಷಣೆ ಅಥವಾ ಉತ್ಪನ್ನಗಳು ಬರಬಹುದು. ಹಳೆಯದು ಬಿಡುತ್ತ ಅಥವಾ ಹೊಸದರಲ್ಲಿ ಸೇರುತ್ತ ಸಾಗಬಹುದು. ಶಿಷ್ಟ ಸಾಹಿತ್ಯದಲ್ಲಿ ಇಂಥದು ನಡೆದರೆ ಉತ್ತರ ಹೇಳಬಹುದಾದರೂ ಜನಪದ ಸಾಹಿತ್ಯದಲ್ಲಿ ಇದಕ್ಕೆ ಉತ್ತರ ಹೇಳುವುದು ಕಷ್ಟವಾಗುತ್ತದೆ.

ಹೀಗೆ ಬಾಯಿಮಾತಿನ ಮೂಲಕ ನಿರಂತರವಾಗಿ ಸಾಹಿತ್ಯ ಉಳಿದುಬಂದಾಗ, ಅದೇ ಒಂದು ಸಂಪ್ರದಾಯವಾಗಿ ಪರಿಣಮಿಸುತ್ತದೆ. ಇದನ್ನೆ ನಾವು ವಾಕ್ ಸಂಪ್ರದಾಯ ಎಂದು ಕರೆಯುವುದು. ಈ ವಾಚಿಕ ವಿಷಯ ಹಲವು ಸೈದ್ಧಾಂತಿಕ ಕಷ್ಟಗಳಿಗೆ ಎಡೆ ಕೊಡುತ್ತದೆ. ಬರೆವಣಿಗೆ ಇಲ್ಲದ ಸಂಸ್ಕøತಿಗಳಲ್ಲಿ ಎಲ್ಲವೂ ವಹನಗೊಳ್ಳುವುದು ವಾಚಿಕವಾಗಿ. ಭಾಷೆ, ಬೇಟೆಯ ತಂತ್ರಗಳು, ವಿವಾಹನಿಯಮಗಳು-ಇವೂ ಕೂಡ ತಲೆಮಾರಿನಿಂದ ತಲೆಮಾರಿಗೆ ಹರಿಯುವುದು ವಾಕ್ ಪರಂಪರೆಯ ಮೂಲಕವಾಗಿಯೇ. ಇದಲ್ಲದೆ, ಬರೆವಣಿಗೆ ಇರುವ ಸಂಸ್ಕøತಿಯಲ್ಲಿ ಕೂಡ ಕೆಲವು ವಿಚಾರಗಳು ವಾಚಿಕವಾಗಿಯೇ ವಹನಗೊಳ್ಳುತ್ತವೆ ಇವೆಲ್ಲವೂ ಜನಪದ ಸಾಹಿತ್ಯದ ವಲಯಕ್ಕೆ ಬರಲಾರವು, ಅಂದರೆ ಜನಪದ ಸಾಹಿತ್ಯೇತರ ವಿಷಯಗಳು ಕೂಡ ವಾಚಿಕವಾಗಿಯೇ ವಹನಗೊಳ್ಳುತ್ತವೆ ಎಂದಂತಾಯಿತು. ಆದ್ದರಿಂದ ವಾಕ್ ಸಂಪ್ರದಾಯ ಜನಪದ ಸಾಹಿತ್ಯಕ್ಕೂ ಇತರ ವಿಷಯಗಳಿಗೂ ಇರುವ ವ್ಯತ್ಯಾಸವನ್ನು ಸೂಚಿಸುತ್ತದೆಂದು ಹೇಳುವುದಕ್ಕಾಗುವುದಿಲ್ಲ.

ವಾಚಿಕ ಸಂಪ್ರದಾಯಕ್ಕೆ ವಿರುದ್ಧವಾಗಿ ಬರೆವಣಿಗೆ ರೂಪದಲ್ಲಿ ಬಂದಿರುವ ಜನಪದ ಸಾಹಿತ್ಯದ ಕೆಲವು ರೂಪಗಳಿವೆ. ಜನಪದ ಕಥೆ ಅಥವಾ ಲಾವಣಿಯೊಂದು ಶತಮಾನಗಳ ಹಿಂದೆ ಬರೆವಣಿಗೆಯ ರೂಪದಲ್ಲಿ ಬಂದಿರಲು ಸಾಧ್ಯವಿದೆ. ಉದಾಹರಣೆಗೆ, ಜಾತಕ, ಪಂಚತಂತ್ರ, ಬೇತಾಲ ಪಂಚವಿಂಶಶಿ ಕಥೆಗಳು ಜನಪದ ಕಥೆಗಳೇ ಆಗಿದ್ದು, ಜನಪದ ಕಥೆಯೊಂದರ ಜೀವನ ಚರಿತ್ರೆಯನ್ನು ರೂಪಿಸುವಲ್ಲಿ ಚಾರಿತ್ರಿಕ ಪಾಠಗಳಾಗಿ ಕಾಣಿಸಿಕೊಳ್ಳುತ್ತವೆ. ಹೀಗಾಗಿ ವಾಕ್‍ಸಂಪ್ರದಾಯ ಜನಪದ ಸಾಹಿತ್ಯದ ವಿಶಿಷ್ಟ ಲಕ್ಷಣವಾದರೂ ಅದಕ್ಕೆ ತನ್ನದೇ ಪರಿಮಿತಿಗಳಿವೆ ಎಂಬುದನ್ನು ನೆನೆಯಬೇಕು. ಎಲ್ಲ ಜಾನಪದವೂ ವಾಚಿಕವಾಗಿ ವಹನಗೊಳ್ಳುತ್ತದೆ. ಆದರೆ ವಾಚಿಕವಾಗಿ ವಹನಗೊಳ್ಳುವುದೆಲ್ಲ ಜಾನಪದವಲ್ಲ ಎಂಬ ವಿದ್ವಾಂಸರೊಬ್ಬರ ಮಾತನ್ನೆ ಜನಪದ ಸಾಹಿತ್ಯಕ್ಕೂ ಅನ್ವಯಿಸಬಹುದು.

ಜನಪದ ಸಾಹಿತ್ಯದ ಮತ್ತೊಂದು ಲಕ್ಷಣವೆಂದರೆ, ಅದು ನಾಗರಿಕತೆಯ ಪೂರ್ವಸ್ವರಗಳ ಉಳಿಕೆಯಾಗಿದೆ ಎಂಬುದು. ಅನಕ್ಷರಸ್ಥರ ಮತ್ತು ಗ್ರಾಮೀಣರ ಬದುಕಿನಲ್ಲಿ ಇನ್ನೂ ಸೇರಿಕೊಂಡಿರುವ ಪ್ರಾಚೀನ ಧಾರ್ಮಿಕ ವಿಧಿಗಳು ಮತ್ತು ಸಾಮಾಜಿಕ ಆಚರಣೆಗಳು ಇವಾಗಿವೆ. ಇವು ನಡೆದ ಸಂಗತಿಗಳ ವಿಚಾರಣೆಗಳಾಗಿರುವುದಕ್ಕಿಂತ ಹೆಚ್ಚಾಗಿ, ಸಾರ ಮಾತ್ರವಾಗಿವೆ. ದೈನಂದಿನ ಜೀವನದಲ್ಲಿ ಜನಪದ ಸಾಹಿತ್ಯದ ಪಾತ್ರವನ್ನು ಇದು ವಿವರಿಸುತ್ತದೆಂದು ತೋರುತ್ತದೆ.
ಜನಪದ ಸಹಿತ್ಯ ಸಾಂಪ್ರದಾಯಿಕವಾಗಿ ಬಂದ ಜನಪದ ಸಂಸ್ಕøತಿಯನ್ನು ಅಭಿವ್ಯಕ್ತಿಸುತ್ತದೆ. ಪರಂಪರಾಗತವಾಗಿ ಅರ್ಜಿಸುವ ಯಾವುದೇ ರೂಪದ ವರ್ತನೆಯನ್ನು ನಾವು ಸಂಸ್ಕøತಿ ಎಂದು ಕರೆಯುತ್ತೇವೆ. ಜನಪದ ಸಾಹಿತ್ಯ ಇಂಥ ಸಾಂಸ್ಕøತಿಕ ವರ್ತನೆಗಳನ್ನು ಹೇಳುವ ಪದ್ಧತಿ, ಸಂಪ್ರದಾಯ, ನಂಬಿಕೆ, ಆಚರಣೆ, ಸೃಷ್ಟಿ ತಂತ್ರಗಳನ್ನು ಒಳಗೊಳ್ಳುತ್ತದೆ. ಇದರಿಂದ ಒಂದು ಜನಪದ ಕಥೆ ಅಥವಾ ಒಂದು ಗಾದೆ ಸಂಸ್ಕøತಿಯ ಭಾಗವೆನಿಸುತ್ತದೆ.

ಜನಪದ ಸಾಹಿತ್ಯದ ಕಾರ್ಯಗಳನ್ನು ಕುರಿತು ಎರಡು ಮಾತು. ಜನಪದ ಸಾಹಿತ್ಯ ಬದುಕಿನೊಡನೆ ಬೆಸೆದು ಬದುಕಿದುದು. ಆದ್ದರಿಂದ ಜನಪದ ಜೀನವದಿಂದ ಜನಪದ ಸಾಹಿತ್ಯವನ್ನು ಬೇರ್ಪಡಿಸಿ ಇಡುವುದು ಅಸಾಧ್ಯ. ಗ್ರಾಮಿಣರ ಎಲ್ಲ ಚಟುವಟಿಕೆಯೊಡನೆ ಇದು ಬೆರೆತುಹೋಗಿದೆ. ಅವರ ಮದುವೆ ಮುಂಜಿಗಳಲ್ಲಿ ಹಬ್ಬಹರಿದಿನಗಳಲ್ಲಿ, ಧಾರ್ಮಿಕ ಸಾಮಾಜಿಕ ಕಾರ್ಯಗಳಲ್ಲಿ ಬೆಳೆಯನ್ನು ಒಡ್ಡುವ ಕುಯ್ಯುವ ಒಕ್ಕುವ ವಿಶಿಷ್ಟ ಸಂದರ್ಭಗಳಲ್ಲಿ ಈ ಕ್ರಿಯೆಯನ್ನು ಕಾಣಬಹುದು. ಇಂಥ ವಿಷಯಗಳಲ್ಲಿ ಗೀತೆಗಳನ್ನು ಹಾಡಿಸುವ, ಕಥೆಗಳನ್ನು ಹೇಳಿಸುವ ವಿಶೇಷ ಸಂಪ್ರದಾಯಗಳೇ ಪ್ರಚಲಿತವಾಗಿವೆ. ಜನಪದ ಸಾಹಿತ್ಯ ಜೀವನದೊಡನೆ ಕ್ರಿಯಾಶೀಲವಾಗುತ್ತದೆಂಬುದನ್ನು ಇವು ವ್ಯಕ್ತಗೊಳಿಸುತ್ತದೆ. ಜನಪದ ಸಾಹಿತ್ಯ ಮನೋರಂಜನೆಯ ಕ್ರಿಯೆಯಾಗಿ ಕೆಲಸ ಮಾಡುವುದಾದರೂ ಶುದ್ಧ ಮನೋರಂಜನೆಗಾಗಿಯೇ ರಚಿತವಾಗಿದೆ ಎಂದು ಹೇಳಲಾಗುವುದಿಲ್ಲ. ವ್ಯಕ್ತಿಯ ಶ್ರಮವನ್ನು ಹೋಗಲಾಡಿಸುವ ಮತ್ತು ಜೀವನದ ಏಕತಾನತೆಯನ್ನು ಮುರಿಯುವ ಸಾಧನವಾಗಿ ಇದು ಬಳಕೆಯಾಗಿದೆ. ಜನಪದ ಸಾಹಿತ್ಯಕ್ಕೆ ಮಾಂತ್ರಿಕ ನಿಯೋಗವೊಂದಿದ್ದು, ಬೆಳೆಯನ್ನು ಬೆಳೆಸುತ್ತದೆ ಮತ್ತು ರಕ್ಷಿಸುತ್ತದೆ ಎಂಬ ನಂಬಿಕೆಯಲ್ಲಿ ಇದನ್ನು ಕಾಣಬಹುದು.
ಜನಪದ ಸಾಹಿತ್ಯ ಜನಪದ ಸಮಾಜದ ನಡುವೆ ಸಾಂಪ್ರದಾಯಿಕ ಶಿಕ್ಷಣ ಸಾಧನವಾಗಿಯೂ ಪಾತ್ರವಹಿಸುತ್ತದೆ. ಪುರಾಣ, ಐತಿಹ್ಯ ಮೊದಲಾದವನ್ನು ಅರಿಯಲು ಇದು ಮುಖ್ಯವಾಗುತ್ತದೆ. ಏಕೆಂದರೆ ಅವು ಸತ್ಯವಿರಬಹುದಾದ ತಿಳಿವಳಿಕೆಯನ್ನು ಹೊಂದಿರುತ್ತದೆ. ಗಾದೆಗಳು ಗತ ತಲೆಮಾರುಗಳ ಸಾರಭೂತ ಜ್ಞಾನವನ್ನು ಹೊಂದಿರುವ ಭಾಗವಾಗಿ ಆಗಾಗ್ಗೆ ಕಾಣಿಸಿಕೊಳ್ಳುತ್ತದೆ. ಗಾದೆಗಳಲ್ಲಿ ವ್ಯಕ್ತವಾಗಿರುವ ಸಂಸ್ಕøತಿಯೊಂದರ ಮೌಲ್ಯಗಳನ್ನು ಅರಿಯಲು ಕೂಡ ಅಷ್ಟೇ ಮುಖ್ಯವಾಗುತ್ತದೆ. ಗಾದೆಗಳ ಮೇಲೆ ಪ್ರಭುತ್ವವನ್ನು ಹೊಂದಿರದ ಅನೇಕ ಆಫ್ರಿಕನ್ ಸಮಾಜಗಳ ವ್ಯಕ್ತಿಗಳು ವಯಸ್ಕರಾಗಿ ಸಫಲ ಜೀವನ ನಡೆಸುವುದು ಕಷ್ಟ. ಈ ಸಮಾಜಗಳಲ್ಲಿ ಗಾದೆಗಳು ವಯಸ್ಕರ ಕ್ಷೇತ್ರವಾಗಿರುವಂತೆ, ಒಗಟುಗಳು ಮಕ್ಕಳ ಕ್ಷೇತ್ರವಾಗಿರುತ್ತವೆ. ಒಗಟುಗಳು ಪ್ರಕೃತಿಯಲ್ಲಿನ ಸಸ್ಯಗಳು, ಪ್ರಾಣಿಗಳು ಮತ್ತಿತರ ವಸ್ತುಗಳ ಲಕ್ಷಣಗಳನ್ನು ಬೋಧಿಸುವುದು ಮಾತ್ರವಲ್ಲದೆ, ಭೌತಿಕ ಸಂಸ್ಕøತಿ ಮತ್ತು ಸಾಮಾಜಿಕ ಸಂಸ್ಕøತಿಗಳ ಕೆಲವು ಲಕ್ಷಣಗಳನ್ನು ಹೇಳುತ್ತವೆ. ಕಾಲ್ಪನಿಕವೆಂದು ಹೇಳಲಾಗಿರುವ ಕಥೆಗಳು ಕೂಡ ಮಕ್ಕಳಿಗೆ ಶಿಕ್ಷಣ ಕೊಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಆಫ್ರಿಕನ್ನರು ನಂಬುತ್ತಾರೆ ; ಏಕೆಂದರೆ, ಇವುಗಳಲ್ಲಿ ಅನೇಕ ಕಥೆಗಳು ನೀತಿಕಥೆಗಳಾಗಿರುವುದು ಜಗತ್ತಿನಾದ್ಯಂತ ಅನಕ್ಷರಸ್ಥ ಸಮಾಜಗಳಲ್ಲಿ ಜನಪದ ಸಾಹಿತ್ಯ ಇಂಥ ಶಿಕ್ಷಣದ ಪಾತ್ರವಹಿಸುವುದನ್ನು ಕಾಣಿಸುತ್ತದೆ. ಕೇಳುವುದು, ನೆನಪಿರಿಸಿಕೊಳ್ಳುವುದು, ನೋಡುವುದು ಮತ್ತು ಅನುಸರಿಸುವುದರ ಮೂಲಕ ಈ ಶಿಕ್ಷಣ ಆದುದು. ಜನಪದ ಸಾಹಿತ್ಯ ತಲೆಮಾರಿನಿಂದ ತಲೆಮಾರಿಗೆ ಜ್ಞಾನ, ಮೌಲ್ಯ ಹಾಗೂ ಮನಃಪ್ರವೃತ್ತಿಗಳನ್ನು ವಹನಿಸುವ ಮಾಧ್ಯಮವೊಂದನ್ನು ಒದಗಿಸುತ್ತದೆ ; ಹೀಗೆ ಸಂಸ್ಕøತಿಯ ನಿರಂತರತೆಯನ್ನು ಕಾಪಾಡಿಕೊಳ್ಳುತ್ತವೆ.
ಜನಪದ ಸಾಹಿತ್ಯ ಸಾಮಾಜಿಕ ನಿಯಂತ್ರಣ ಶಕ್ತಿಯಾಗಿ ಮತ್ತು ಸಾಮಾಜಿಕ ವಿಧಾಯಕ ಶಕ್ತಿಯಾಗಿ ಕೂಡ ಕೆಲಸ ಮಾಡುತ್ತದೆ. ಸಾಂಸ್ಕøತಿಕ ಮೌಲ್ಯಗಳನ್ನು ಮತ್ತು ಸಾಮಾಜಿಕ ವರ್ತನೆಗಳನ್ನು, ಅವುಗಳಿಂದ ಜನತೆ ತಪ್ಪಿಹೋಗದ ಹಾಗೆ ನೋಡಿಕೊಳ್ಳುತ್ತದೆ. ಈ ಸಾಮಾಜಿಕ ಕಟ್ಟುಪಾಡುಗಳಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿದಾಗ ಗಾದೆಗಳು, ಗೀತೆಗಳು, ಒಗಟುಗಳು ಮತ್ತು ಕಥೆಗಳು ಕೂಡ ಅದನ್ನು ವಿಮರ್ಶಿಸಲು ತೊಡಗುತ್ತವೆ. ಸಮಾಜ ವ್ಯಕ್ತಿಯ ಮೇಲೆ ಹೇರಲಾದ ನಿರ್ಬಂಧಗಳಿಂದ ಮಾನಸಿಕವಾಗಿ ವ್ಯಕ್ತಿ ಬಿಡುಗಡೆ ಪಡೆಯಲು ಜನಪದ ಸಾಹಿತ್ಯ ಸಹಾಯ ಮಾಡುತ್ತದೆ. ಇವುಗಳ ಜೊತೆಯಲ್ಲಿಯೇ ಸಾಂಸ್ಕøತಿಕ ನಿರಂತರತೆ ಮತ್ತು ಸ್ಥಿರತೆಯನ್ನು ನಿರ್ವಹಿಸುವ ಕಾರ್ಯವನ್ನು ಕೂಡ ಇದು ಮಾಡುತ್ತದೆ. ವ್ಯಕ್ತಿಗಳಲ್ಲಿ ನೈತಿಕಮಟ್ಟವನ್ನು ಕಾಪಾಡಿಕೊಂಡು ಬರಲು ನೆರವಾಗಿದೆ.

ಇದಲ್ಲದೆ, ಜನಪದ ಸಾಹಿತ್ಯ ರಾಜಕೀಯ ಪ್ರಚಾರಕಾರ್ಯಕ್ಕೆ ಮತ್ತು ಸಾಮಾಜಿಕ ವ್ಯತ್ಯಾಸಕ್ಕೆ ದುಡಿದಿದೆ. ಆಫ್ರಿಕದ ಸ್ವತಂತ್ರ ದೇಶಗಳ ತುರ್ತು ಪರಿಸ್ಥಿತಿಗಳಲ್ಲಿ, ಅಲ್ಲಿನ ಪುರಾಣ, ಐತಿಹ್ಯ, ಗೀತೆಗಳು ಜನಾಂಗದ ಐಕ್ಯ, ಪ್ರಾಂತೀಯತೆ, ರಾಷ್ಟ್ರೀಯತೆ, ವಸಾಹತು ಷಾಹಿವಿರೋಧಿ ಭಾವನೆಗಳನ್ನು ಉದ್ದೀಪಿಸಲು ಉಪಯೋಗವಾಗಿವೆ. ಆಫ್ರಿಕದ ಸಂಕೀರ್ತನ ಗೀತೆಗಳನ್ನು ಅಲ್ಲಿನ ನೂತನ ರಾಜಕೀಯ ಮುಖಂಡರನ್ನು ಸನ್ಮಾನಿಸಲು ಹೊಂದಿಸಿಕೊಳ್ಳಲಾಯಿತು ; ಹಾಗೆಯೇ ಪರೋಕ್ಷ ಸೂಚನಾಗೀತೆಗಳನ್ನು ವಿರೋಧಿ ರಾಜಕಾರಣಿಗಳು ಹಾಗೂ ವಸಾಹತು ಷಾಹಿ ಅಧಿಕಾರಿಗಳನ್ನು ಟೀಕಿಸಲು ಬಳಸಲಾಯಿತು. ರಷ್ಯದಲ್ಲಿ ಜನಪದ ಸಾಹಿತ್ಯವನ್ನು ಪರಿಣಾಮಕಾರಿ ರಾಜಕೀಯ ಆಯುಧವಾಗಿ ಮಾಡಿಕೊಂಡುದು ತಿಳಿದ ವಿಷಯವೇ ಆಗಿದೆ. ಜನಪದ ಕಥೆ ಮತ್ತು ಗೀತೆಗಳನ್ನು ರಷ್ಯ, ಚೀನ, ಕ್ಯೂಬಗಳಲ್ಲಿನ ವರ್ಗಕಲಹದ ವಿಷಯವನ್ನು ಮುಂದಿಡಲು ಉತ್ತಮ ಸಾಧನವಾಗಿ ಉಪಯೋಗಿಸಲಾಯಿತು. ಅನಕ್ಷರಸ್ಥ ಸಮಾಜಗಳಲ್ಲಿನ ಕಾನೂನು, ಮೌಲ್ಯಗಳು, ಮನಶ್ಯಾಸ್ತ್ರ ಮತ್ತು ಇತಿಹಾಸವನ್ನು ಅರಿಯಲು ಜನಪದ ಸಾಹಿತ್ಯ ಉಪಯುಕ್ತವಾದ ವಿಷಯಗಳನ್ನು ಒದಗಿಸುತ್ತದೆ.

	ಜನಪದ ಸಾಹಿತ್ಯದ ಸಾಹಿತ್ಯಿಕ ಮೌಲ್ಯದ ವಿಚಾರ. ಮೊದಲನೆಯದಾಗಿ ಜನಪದ ಸಾಹಿತ್ಯ ಸಾಂಪ್ರದಾಯಿಕ ಕಲೆ ; ವ್ಯಕ್ತಿನಿಷ್ಠವಾದುದಕ್ಕಿಂತ ಸಮೂಹ ನಿಷ್ಠವಾದುದು. ಆದ್ದರಿಂದ ಮೌಲ್ಯಮಾಪನ ಸಾಧನಗಳು ಶಿಷ್ಟಸಾಹಿತ್ಯಕ್ಕಿಂತ ಜನಪದ ಸಾಹಿತ್ಯಕ್ಕೆ ಬೇರೆಯಾಗಿರಬೇಕಾದುದು ಅನಿವಾರ್ಯವಾಗುತ್ತದೆ. ಆದ್ದರಿಂದ ಜನಪದ ಸಾಹಿತ್ಯದ ವಿಮರ್ಶಾಸೂತ್ರಗಳನ್ನು ಜನಪದ ಸಾಹಿತ್ಯದಿಂದಲೇ ಸಿದ್ಧಿಸಿಕೊಳ್ಳಬೇಕಾಗಿದೆಯೇ ಹೊರತು, ಆಧುನಿಕ ಸಾಹಿತ್ಯದಿಂದಲ್ಲ ಎಂಬುದನ್ನು ಮರೆಯಬಾರದು. ಜನಪದ ಸಾಹಿತ್ಯವನ್ನು ವಿವೇಚಿಸುವಾಗಲೆಲ್ಲ ಅದರ ಉಗಮ ವಿಕಾಸ ಪರಿಸರಗಳ ಪರಿವೆ ನಮಗಿರಬೇಕಾಗುತ್ತದೆ. ಅಂದರೆ ಶುದ್ಧ ಸಾಹಿತ್ಯಿಕ ದೃಷ್ಟಿಯೇ ಇದರಲ್ಲಿ ಸಾಧ್ಯವಿಲ್ಲ ಎಂದು ಇದರ ಅರ್ಥವಲ್ಲ. ಹಾಗೆ ನೋಡುವಾಗ ಅದರ ಇತಿಮಿತಿಗಳ ಜಾಯಮಾನಗಳ ಹಿನ್ನೆಲೆಯಲ್ಲಿಟ್ಟೇ ಪರಿಶೀಲಿಸಬೇಕಾಗುತ್ತದೆ ಎಂಬುದು ಇದರ ಅರ್ಥ. ಸಾಹಿತ್ಯಿಕ ದೃಷ್ಟಿಯಿಂದ ಗಮನಾರ್ಹವಲ್ಲದ ಪದ್ಯವೊಂದು ಜನಪದ ದೃಷ್ಟಿಯಿಂದ ಗಮನಾರ್ಹವೆನಿಸಬಹುದು. ಆದ್ದರಿಂದ ಜನಪದ ಸಾಹಿತ್ಯದಲ್ಲಿ ಆಯ್ಕೆಯ ವಿಷಯ ಬಿದ್ದುಹೋಗುತ್ತದೆ. ಜನಪದ ಸಂಸ್ಕøತಿಯಲ್ಲಿ ನಿಚೋಚ್ಚವೆಂಬುದು ಇರುವುದಿಲ್ಲ. ಮಾನವಶಾಸ್ತ್ರದಲ್ಲಿ ತೀರ ಮುಂದುವರಿದ ಸಂಸ್ಕøತಿಗಳನ್ನು ಗಮನಿಸುವಂತೆಯೇ ತೀರ ಹಿಂದುಳಿದ ಸಂಸ್ಕøತಿಗಳನ್ನೂ ಸಮಾನವಾಗಿ ಪರಿಗಣಿಸಲಾಗುತ್ತದೆ. ಹಾಗೆಯೇ ಜನಪದ ಸಾಹಿತ್ಯದಲ್ಲಿ ಕೂಡ. ಆದರೆ ಜನಪದ ಸಾಹಿತ್ಯವನ್ನು ಸಾಹಿತ್ಯದೃಷ್ಟಿಯಿಂದ ಪರಿಶೀಲಿಸಿ ಬೆಲೆ ಕಟ್ಟಬಾರದೆಂದೇನೂ ನಿಯಮವಿಲ್ಲ. ಹೀಗೆ ಮಾಡುವಾಗ ಬಹುಮುಖ್ಯ ಸಂಗತಿಯೊಂದನ್ನು ನೆನಪಿಡಬೇಕಾಗುತ್ತದೆ. ವ್ಯಕ್ತಿ ಅಧೀನನಾಗಿ ಸಮಾಜ ಪ್ರಧಾನವಾಗಿದ್ದ ಸಾಮಾಜಿಕ ಸ್ತರದಲ್ಲಿ ಇದು ಉಗಮಗೊಂಡಿದ್ದರಿಂದ, ಒಂದು ಗುಂಪಿನ ಆದೇಶ ಮುಖ್ಯವಾಗುತ್ತದೆಯೇ ಹೊರತು, ವ್ಯಕ್ತಿ ವಿಶಿಷ್ಟತೆಯಲ್ಲ. ಆದುದರಿಂದ ಇಂಥ ಸಾಹಿತ್ಯದಲ್ಲಿ ಪ್ರತಿಭಟನೆ, ಕ್ರಾಂತಿ, ಸಂಕೀರ್ಣತೆ ಮುಂತಾದುವು ಇಲ್ಲವೆಂದು ಪಟ್ಟಿ ಮಾಡುವುದು ಅಸಂಗತವಾಗುತ್ತದೆ. ಅಲ್ಲದೆ ಪ್ರತಿಭಟನೆ, ಕ್ರಾಂತಿ , ಸಂಕೀರ್ಣತೆ ಇರುವುದು ಮಾತ್ರ ಶ್ರೇಷ್ಠ ಸಾಹಿತ್ಯವಾಗುತ್ತದೆ, ಉಳಿದುದು ಆಗಲಾರದು ಎಂದು ಹೇಳುವುದೂ ತಪ್ಪಾಗುತ್ತದೆ. ಹಾಗೆ ನೋಡಿದಾಗ, ಜನಪದ ಸಾಹಿತ್ಯವೂ ಉತ್ತಮತೆಯನ್ನು ನಿಸ್ಸಂದೇಹವಾಗಿಯೂ ಉಳಿಸಿಕೊಳ್ಳುತ್ತದೆಂದು ಹೇಳಬಹುದು.

	ಜನಪದ ಸಾಹಿತ್ಯದಲ್ಲಿ ಕಥೆ, ಗೀತೆ ಗಾದೆ ಮತ್ತು ಒಗಟುಗಳೆಂದು ನಾಲ್ಕು ಪ್ರಕಾರಗಳು ಬರುತ್ತವೆ. ಮೊದಲ ಎರಡರಲ್ಲಿ ಭಾವಾಂಶವೇ ಪ್ರಧಾನವಾದರೆ ಕಡೆಯ ಎರಡರಲ್ಲಿ ಚಿಂತನಾಂಶವೇ ಎದ್ದು ಕಾಣುತ್ತದೆ. ಕಥೆಯೊಂದನ್ನು ಬಿಟ್ಟು ಉಳಿದವುಗಳಲ್ಲಿ ರೂಪಾಂಶವೂ ಗಮನಾರ್ಹವೇ. ಇವು ಆದಿಮಾನವನ ಭಾವುಕತೆ, ಭೌದ್ಧಿಕತೆ ಹಾಗೂ ಸಂಸ್ಕøತಿ ನಾಗರಿಕತೆಗಳಿಗೆ ಬಹು ಚೆನ್ನಾಗಿ ಕನ್ನಡಿ ಹಿಡಿಯುತ್ತವೆ. ಮಾನವ ಮನಸ್ಸಿನ ವಿಕಾಸದ ಸ್ತರಗಳನ್ನು ಭಾವ, ಭಾವ-ಬುದ್ಧಿ ಮತ್ತು ಬುದ್ಧಿ ಎಂಬುದಾಗಿ ಗುರುತಿಸಬಹುದು. ಕಥೆ ಮತ್ತು ಗೀತೆ ಮೊದಲ ಸ್ತರದಲ್ಲೂ ಗಾದೆ ಎರಡನೆಯ ಹಂತದಲ್ಲೂ ಒಗಟು ಮೂರನೆಯ ಮೆಟ್ಟಿಲಿನಲ್ಲೂ ಸೃಷ್ಟಿಯಾಗಿರಬೇಕೆಂದು ತೋರುತ್ತದೆ. ಇವುಗಳಲ್ಲಿ ಗಾದೆ ಮತ್ತು ಒಗಟಿಗೆ ಪರಸ್ಪರ ಸಂಬಂಧವಿದೆ. ಗಾದೆ ಬುದ್ಧಿ ಭಾವಗಳ ವಿದ್ಯುದಾಲಿಂಗನವಾಗಿದ್ದು ಸಾಕಷ್ಟು ಬೆಳವಣಿಗೆಗೊಂಡ ಮನುಷ್ಯನ ಆಲೋಚನಾವ್ಯವಸ್ಥೆಯನ್ನು ಪ್ರತಿನಿಧಿಸುತ್ತದೆ. ವಿಕಾಸದ ಇತ್ತೀಚಿನ ಸೃಷ್ಟಿಯೆಂದರೆ ಒಗಟೆಂದು ಹೇಳಬಹುದು. ಇದು ಬುದ್ಧಿಪೂರ್ವಕದ್ದಾಗಿರದೆ ಬುದ್ಧಿಪೂರ್ವಕವಾದುದಾಗಿರಬೇಕೆನಿಸುತ್ತದೆ.

	ಪುರಾತನ ಜೀವಿಗಳ ಅತ್ಯುನ್ನತ ಕಲ್ಪನಾಸ್ಥಿತಿಗೆ ಮತ್ತು ವಿಲಕ್ಷಣ ಮನೋಭಾವಗಳಿಗೆ ಪ್ರತಿನಿಧಿಯಾಗುವ ಕಲಾತ್ಮಕ ಸೃಷ್ಟಿಗಳಾಗುತ್ತವೆ. ಜನಪದ ಕಥೆಗಳು, ಇವುಗಳಲ್ಲಿನ ಅದ್ಭುತ ಹಾಗೂ ಅತಿಮಾನುಷ ಅಂಶಗಳು ನಮ್ಮ ಕುತೂಹಲವನ್ನು ಕೆರಳಿಸಿ ತಣಿಸುವುದಲ್ಲದೆ, ನಮ್ಮ ಬೌದ್ಧಿಕತೆಗೆ ಸವಾಲಾಗಿಯೂ ಪರಿಣಮಿಸುತ್ತವೆ. ಇವುಗಳ ಹಿಂದೆ ಯಾವುದೇ ರೀತಿಯ ಧಾರ್ಮಿಕ ಮಾಂತ್ರಿಕ ಪದ್ಧತಿಗಳು ಕೆಲಸ ಮಾಡಿರಲಿ, ಆದಿವಾಸಿಯ ಸೃಷ್ಟಿಶಕ್ತಿಯ ವಿಲಾಸವೈಭವಗಳಿಗೆ ಇವು ಇನ್ನಿಲ್ಲದ ಉದಾಹರಣೆಗಳಂತೂ ಖಂಡಿತ ಆಗುತ್ತವೆ. ಇವು ಮಾನವನಲ್ಲಿ ಸಾಹಸ ಭಾವಾನುಭವನ್ನು ಪ್ರಚೋದಿಸುತ್ತವೆ ಮತ್ತು ಸುಪ್ತ ಮನಸ್ಸಿಗೆ ನಾಲಗೆಯಾಗುತ್ತವೆ. ಜನಪದ ಕಥೆಗಳಲ್ಲಿ ಚಿತ್ರಿತವಾಗಿರುವ ಸಾಹಸ ಪರಂಪರೆಗಳು ಮತ್ತು ಆದರ್ಶೀಕೃತ ಜಗತ್ತು ಇದನ್ನು ಬಿಂಬಿಸುತ್ತವೆ.

	ಜನಪದ ಕಥೆಗಳನ್ನು ವಸ್ತುವಿನ ದೃಷ್ಟಿಯಿಂದ ಪೌರಾಣಿಕ ಕಥೆಗಳು, ಐತಿಹ್ಯದ ಕಥೆಗಳು ಕಾಲ್ಪನಿಕ ಕಥೆಗಳು, ಸಾಮಾಜಿಕ ಕಥೆಗಳು ಮತ್ತು ರಹಸ್ಯಾತ್ಮಕ ಕಥೆಗಳೆಂದು ಐದು ಭಾಗಗಳಾಗಿ ವಿಂಗಡಿಸಿಕೊಳ್ಳಬಹುದು. ಪೌರಾಣಿಕ ಆವರಣ ಹಾಗೂ ಪಾತ್ರ ಸನ್ನಿವೇಶಗಳಿಂದ ಕೂಡಿ ರಚಿತವಾಗಿರುವ ಕಥೆಗಳನ್ನು ಪೌರಾಣಿಕ ಕಥೆಗಳೆಂದು ಭಾವಿಸಬಹುದು. ಇದು ಪುರಾಣಕ್ಕೂ ಜನಪದ ಕಥೆಗೂ ಇರುವ ಸಂಬಂಧವನ್ನು ಕೆಲಮಟ್ಟಿಗೆ ಹೇಳುತ್ತದೆ. ವಾಸ್ತವತೆ ಮತ್ತು ದೈವಿಕತೆಗಳ ಸಂಗಮದಂತಿರುವ ಐತಿಹ್ಯ ಕಥೆಗಳ ಉಗಮಸ್ಥಾನದಲ್ಲಿ ಚಾರಿತ್ರಿಕ ಸಂಗತಿ ಅಥವಾ ಘಟನೆಯೊಂದು ಇರುವಂತೆ ಭಾಸವಾಗುತ್ತದೆ. ಇಂಥ ಕತೆಗಳನ್ನು ನಡೆದಿವೆ ಎಂದು ಜನಪದ ನಂಬಿಕೊಂಡು ಬಂದಿದೆ. ಕಲ್ಪನೆಯನ್ನೇ ಆಧಾರವಾಗಿ ಉಳ್ಳುವು ಕಾಲ್ಪನಿಕ ಕಥೆಗಳು. ಇಂಥ ಕಥೆಗಳಲ್ಲಿ ಕಥೆಯೇ ಮುಖ್ಯವಾಗಿದ್ದು, ಉಳಿದೆಲ್ಲ ವಿಷಯಗಳು ಅದಕ್ಕೆ ದುಡಿಯುವುದನ್ನು ನೋಡುತ್ತೇವೆ. ಇವುಗಳಲ್ಲಿ ಇಂದು ಯಾವುದೇ ಐತಿಹಾಸಿಕ ಮೌಲ್ಯವನ್ನು ಗುರುತಿಸುವುದಕ್ಕೆ ಸಾಧ್ಯವಿಲ್ಲದ್ದರಿಂದ ಕಲಾಮೌಲ್ಯವೇ ಪ್ರಧಾನವಾಗುತ್ತದೆ. ಸಾಮಾಜಿಕ ಕಥೆಗಳು ಸಾಮಾಜಿಕ ರೀತಿನೀತಿಗೆ ಕಿಂಡಿಗಳಾಗುತ್ತವೆ. ಅತಿಮಾನುಷ ಅಂಶ ಕಡಿಮೆಯಾಗಿ ವಾಸ್ತವಿಕತೆ ಆಳುತ್ತದೆ. ಸಮಾಜದ ದೋಷ ದೌರ್ಬಲ್ಯಗಳನ್ನು ಕೆಲವೊಂದು ಅಸಂಗತ ಪಾತ್ರಗಳ ಮೂಲಕ ಅಭಿವ್ಯಕ್ತಿಸುತ್ತವೆ. ಇಂಥ ಕಥೆಗಳಲ್ಲಿ ಹಾಸ್ಯವಿದ್ದರೂ ವಿಡಂಬನ ಪ್ರವೃತ್ತಿಯೊಂದು ತಪ್ಪದೆ ಕೆಲಸ ಮಾಡುತ್ತದೆ. ರಹಸ್ಯಾತ್ಮಕ ಕಥೆಗಳು ದೊರೆಯುವುದು ವಿರಳವೆಂದೇ ಹೇಳಬೇಕು. ಈ ಎಲ್ಲ ಕಥೆಗಳಲ್ಲಿ ವಸ್ತು ವೈವಿಧ್ಯ ಮತ್ತು ಪಾತ್ರ ವೈವಿಧ್ಯಗಳ ಜೊತೆಗೆ ಕಲ್ಪನಾರಮ್ಯತೆಯೊಂದು ಕಥನದೇಹವನ್ನು ತುಂಬುತ್ತದೆ. ಎಲ್ಲ ವಯೋಮಾನದವರನ್ನೂ ಸೆಳೆಯುವ ಗುಣವೇ ಇದು.	

ಜನಪದ ಕಥೆಗಳಲ್ಲಿ ಸಾಮಾನ್ಯವಾಗಿ ದಟ್ಟ ನಿರೂಪಣೆ ಬರುವುದಿಲ್ಲ ; ದ್ರುತ ಗತಿಯೇ ಇದರ ಜೀವಾಳವಾಗಿದೆ. ಸಂವಾದ ರಮಣೀಯತೆ, ಭಾಷೆಯ ಲವಲವಿಕೆ, ಕಥನಸರಳತೆ, ಪುನರಾವರ್ತನೆ-ಇವು ಕಥೆಯನ್ನು ಅತಿಶಯವಾಗಿ ಶೃಂಗರಿಸಿವೆ. ನಮ್ಮ ಊಹೆಗೆ ಏನನ್ನು ಬಿಡದೆ ಎಲ್ಲವನ್ನು ಬಿಚ್ಚಿಡುವುದು ಇದರ ಒಂದು ವಿಶೇಷಗುಣ. ಘಟನೆಗಳೆಲ್ಲ ಕ್ರಿಯಾಶೀಲತೆಯ ಕಡೆಗೆ ತಿರುಗಿ, ನಿರೀಕ್ಷಿತ ಗುರಿಯ ಕಡೆಗೆ ತೀವ್ರವಾಗಿ ಧಾವಿಸುವುದನ್ನು ಕಾಣುತ್ತೇವೆ. ಪಾತ್ರಗಳಲ್ಲಿ ಬಾಹುಳ್ಯವಿದ್ದರೂ ವಿನ್ಯಾಸದಲ್ಲಿ ಜಟಿಲತೆ ಮೂಡದಿರುವುದು ಗಮನಾರ್ಹ ಸಂಗತಿ. ಪುನರಾವರ್ತನ ಕ್ರಿಯೆಯಲ್ಲಿ ನಮ್ಮನ್ನು ಹಿಂದಕ್ಕೆ ದೂಡಿ, ಮುಂದಕ್ಕೆ ಎಳೆದುಕೊಳ್ಳುವ ಕ್ರಮದಲ್ಲಿ ಕಥೆಗಾರಿಕೆಯ ಕುಶಲ ಕಲೆಗಾರಿಕೆಯನ್ನು ಗುರುತಿಸುತ್ತೇವೆ.

	ಜನಪದ ಸಾಹಿತ್ಯದಲ್ಲಿ ಸಾಹಿತ್ಯಾಂಶ ಅತಿಶಯವಾಗಿ ಅರಳಿಕೊಂಡಿರುವುದು ಅದರ ಗೀತಭಾಗದಲ್ಲಿಯೇ. ಅನುಭವ ಮತ್ತು ಅಭಿವ್ಯಕ್ತಿ ಕ್ರಿಯೆಗಳೆರಡೂ ಒಟ್ಟಿಗೆ ದುಡಿಯುವ ಇದರಲ್ಲಿ ಜನಪದದ ಆಶೋತ್ತರಗಳೂ ಸಾಮಾಜಿಕ ಅನಿಸಿಕೆಗಳು ಸಾಂಪ್ರದಾಯಿಕ ಹಿನ್ನಲೆಯೊಡನೆ ಬಹುಮಟ್ಟಿಗೆ ನೇರವಾಗಿ ಪ್ರಕಟಗೊಂಡಿವೆ. ಜನಪದ ಗೀತೆಗಳಂಥ ಭಾವನಿಷ್ಠ ಭಾಗಗಳಲ್ಲಿ ಮಾತ್ರವಲ್ಲದೆ, ಲಾವಣಿಗಳಂಥ ಶುದ್ಧ ವಸ್ತುನಿಷ್ಟ ಪ್ರಕಾರಗಳಲ್ಲಿಯೂ ಇದು ಕೆಲಸಮಾಡುವುದನ್ನು ಕಾಣುತ್ತೇವೆ. ಆದರೆ ಇಲ್ಲಿ ಕಥನ ಮಾಧ್ಯಮದ ಮೂಲಕ ವ್ಯಕ್ತಗೊಳ್ಳುತ್ತದೆ. ವಿವಿಧ ಲಯವಿನ್ಯಾಸಗಳುಳ್ಳ ಪದ್ಯದ ಮತ್ತು ಪದ್ಯಗಂಧಿಯಾದ ವಚನದ ಈ ಎಲ್ಲ ಗೀತೆಗಳನ್ನು ಅವುಗಳ ಸಂದರ್ಭದೊಡನೆ ಹಾಡಿದಾಗ ವಿಶೇಷವಾಗಿ ನಮ್ಮನ್ನು ಅವು ಆಕರ್ಷಿಸುತ್ತವೆ. ಕನ್ನಡಕ್ಕೆ ಸಂಬಂಧಿಸಿದಂತೆ ಜನಪದಗೀತೆ ಗೀತಸಂಪ್ರದಾಯಗಳು ಮತ್ತು ಕಾವ್ಯ ಸಂಪ್ರದಾಯಗಳು ಒಡೆದುಕೊಳ್ಳುತ್ತದೆ.

	ಕರ್ನಾಟಕಾದ್ಯಂತ ಹಲವಾರು ಗೀತ ಸಂಪ್ರದಾಯಗಳು ಪ್ರಚಲಿತವಿದೆ. ಕೋಲಾಟದ ಪದಗಳು, ಅಂಟಿಕೆಪಂಟಿಕೆ ಪದಗಳು, ಹಂತಿಯ ಹಾಡುಗಳು, ಹುತ್ತರಿ ಹಾಡುಗಳು, ಶಾಸ್ತ್ರದ ಹಾಡುಗಳು, ಬೀಸುವ ಪದಗಳು, ಕುಟ್ಟುವ ಪದಗಳು, ಮಾರ್ನವಮಿಯ ಪದಗಳು, ದೇವರ ಹಾಡುಗಳು, ಲಾಲಿಪದಗಳು ಇತ್ಯಾದಿಗಳನ್ನು ಉದಾಹರಿಸಬಹುದು. ಆಟ, ಸಂಗೀತ ಮತ್ತು ನೃತ್ಯಗಳ ಮಿಶ್ರ ಕಲೆಯಾಗಿರುವ ಕೋಲಾಟಕ್ಕೆ ಸಂಬಂಧಿಸಿದ ಗೀತೆಗಳೇ ಕೋಲಾಟದ ಪದಗಳು. ಕೋಲಾಟಕ್ಕೆ ಸಂಗೀತದ ಆವರಣವನ್ನು ಸೃಷ್ಟಿಸುವುದೇ ಇವುಗಳ ಉದ್ದೇಶ. ಮಲೆನಾಡಿನ ದೀಪ ನೀಡುವ ಸಂಪ್ರದಾಯಕ್ಕೆ ಸೇರಿದವು ಅಂಟಿಪಂಟಿಕೆ ಪದಗಳು. ಹಂತಿಯ ಹಾಡುಗಳು ಸುಗ್ಗಿಯ ಹಾಡುಗಳೆಂದೇ ಪ್ರಸಿದ್ಧವಾಗಿವೆ. ಕೊಡಗಿನ ಹುತ್ತರಿಹಬ್ಬದಲ್ಲಿ ಹಾಡುವ ಹಾಡುಗಳು ಹುತ್ತರಿ ಹಾಡುಗಳು ; ಇವು ಅಲ್ಲಿನ ಸುಗ್ಗಿಯ ಹಾಡುಗಳಾಗಿವೆ. ಮದುವೆಯ ವಿವಿಧ ಶಾಸ್ತ್ರಗಳಲ್ಲಿ ಹಾಡಲಾಗುವ ಗೀತೆಗಳನ್ನೇ ಶಾಸ್ತ್ರದ ಹಾಡುಗಳೆಂದು ಕರೆಯುವುದು. ಬೀಸುವ ಮತ್ತು ಕುಟ್ಟುವ ಕ್ರಿಯೆಯೊಂದಿಗೆ ಹಾಡುವ ಗೀತೆಗಳು ಬೀಸುವ ಪದಗಳು ಮತ್ತು ಕುಟ್ಟುವ ಪದಗಳೆನಿಸಿವೆ. ಇವನ್ನು ಕ್ರಮವಾಗಿ ರಾಗಿಯ ಕಲ್ಲಿನ ಪದಗಳು ಮತ್ತು ಒನಕೆವಾಡುಗಳೆಂದು ಕರೆಯಲಾಗುತ್ತದೆ. ಮಾರ್ನವಮಿಯ ಪದಗಳನ್ನು ಹರಕೆಯ ಪದಗಳೆಂದು ಕರೆಯಲಾಗುತ್ತದೆ. ಬಯಲುಸೀಮೆಯ ಸಂಪ್ರದಾಯದ ಇವನ್ನು ನವರಾತ್ರಿಯ ಸಮಯದಲ್ಲಿ ಹಾಡಲಾಗುತ್ತದೆ. ದೇವರ ಹಾಡುಗಳು ಸ್ತುತಿಪದ್ಯಗಳೆಂದೇ ಖ್ಯಾತಿವೆತ್ತಿವೆ. ಗ್ರಾಮದೇವತೆ ಗೃಹದೇವತೆ, ಕುಲದೇವತೆ, ಪ್ರಾದೇಶಿಕ ದೇವತೆ ಹಾಗೂ ಪುರಾಣದೇವತೆಗಳನ್ನು ಕುರಿತು ಮಾಡಿದ ಪ್ರಾರ್ಥನಾ ಗೀತೆಗಳೇ ಇವು. ಲಾಲಿ ಪದಗಳು ಮಕ್ಕಳನ್ನು ಕುರಿತ ಗೀತೆಗಳಾಗಿವೆ. ಹೀಗೆಯೇ ಕೊಂತಿಪದಗಳು, ತಿಂಗಳಮಾಮನ ಪದಗಳು, ದೋಣಿಯ ಪದಗಳು, ದುಂದುಭಿ ಹಾಡುಗಳು, ಗೌರಿಶೀಗೆಯ ಹಾಡುಗಳು, ಹೊಗಳುವ ಪದಗಳು, ರಂಗದ ಪದಗಳು, ಬಂಡಿಪದಗಳು, ಕಂಬಿಯ ಹಾಡುಗಳು ಮುಂತಾದವನ್ನು ಹೆಸರಿಸಬಹುದು. ಈ ಎಲ್ಲ ಹಾಡುಗಳಲ್ಲಿಯೂ ನಿರ್ದಿಷ್ಟ ಹಿನ್ನೆಲೆ, ಸಂದರ್ಭ ಹಾಗೂ ಸಂಪ್ರದಾಯಗಳಿರುತ್ತವೆ ಎಂಬುದನ್ನು ಕಾಣಬಹುದು. ಸಂದರ್ಭದ ಹಿನ್ನೆಲೆಯನ್ನು ಬಿಟ್ಟು, ವಸ್ತು ಅಥವಾ ಭಾವವನ್ನು ತೆಗೆದುಕೊಂಡರೆ, ಪ್ರಣಯ, ಭಕ್ತಿ ದಾಂಪತ್ಯ, ವೀರ, ಕರುಣ, ಕೌಟುಂಬಿಕ, ತೌರು, ವಿಡಂಬನೆ, ಹಾಸ್ಯ, ವಾತ್ಸಲ್ಯ- ಮುಂತಾಗಿ ಗೀತೆಗಳನ್ನು ವಿಭಾಗಿಸಿಕೊಳ್ಳಬೇಕಾಗುತ್ತದೆ.

	ಕನ್ನಡನಾಡಿನಲ್ಲಿ ವೃತ್ತಿಗಾಯಕರ ಪರಂಪರೆಗೆ ಸೇರಿದ ಹಲವಾರು ಕಾವ್ಯಸಂಪ್ರದಾಯಗಳು ಕಂಡುಬರುತ್ತವೆ. ವೃತ್ತಿ ಗಾಯಕರಲ್ಲಿ ಧಾರ್ಮಿಕ ಮತ್ತು ಲೌಕಿಕ ವೃತ್ತಿ ಗಾಯಕರೆಂದು ಎರಡು ಬಗೆ. ಆರಾಧ್ಯದೈವವೊಂದರ ಸುತ್ತ ಹೆಣೆದುಕೊಂಡ ಸಂಪ್ರದಾಯ ಮೊದಲನೆಯದಾದರೆ, ಎರಡನೆಯದರಲ್ಲಿ ಇಂಥ ಯಾವುದೇ ಧಾರ್ಮಿಕ ವೃತ್ತವೊಂದು ಇರುವುದಿಲ್ಲ. ಕಂಸಾಳೆಯವರು, ನೀಲಗಾರರು, ಚೌಡಿಕೆಯವರು, ಗೊಂದಲಿಗರು, ಜುಂಜಪ್ಪನವರು, ಗೊರವರು, ಜೋಗಿಗಳು ಮೊದಲನೆಯ ಗುಂಪಿಗೆ ಬಂದರೆ, ಕರಪಾಲದವರು, ಹೆಳವರು , ತಂಬೂರಿಯವರು, ಜೋಳಿಗೇರು ಎರಡನೆಯ ಸಂಪ್ರದಾಯಕ್ಕೆ ಬರುತ್ತಾರೆ. ಇಲ್ಲಿನ ಬಹುತೇಕ ಸಂಪ್ರದಾಯದ ಕಾವ್ಯಗಳು ಹಾಡು ಮತ್ತು ವಚನ ಮಿಶ್ರಿತವಾಗಿ ಹರಿಯುವಂಥವು. ಎಲ್ಲದರಲ್ಲಿಯೂ ವಾದ್ಯವೊಂದು ತಪ್ಪದೆ ಇರುತ್ತದೆ. 	

ಕಂಸಾಳೆ ಮತ್ತು ನೀಲಗಾರರವು ಮೈಸೂರಿನ ಕಡೆ ಪ್ರಚಲಿತವಿರುವ ಎರಡು ಅವಳಿ ಸಂಪ್ರದಾಯಗಳಾಗಿದ್ದು, ಕನ್ನಡಕ್ಕೆ ಎರಡು ಜನಪದ ಮಹಾಕಾವ್ಯಗಳನ್ನು ಕೊಟ್ಟ ಕೀರ್ತಿಗೆ ಪಾತ್ರವಾಗಿವೆ. ಮೊದಲನೆಯದರಲ್ಲಿ ಮಾದೇಶ್ವರನೂ ಎರಡನೆಯದರಲ್ಲಿ ಮುಂಟೇಶ ಸ್ವಾಮಿಯೂ ಆರಾಧ್ಯದೇವತೆಗಳಾಗಿದ್ದು, ಒಂದು ಕಾಲದಲ್ಲಿ ಅವರು ಐತಿಹಾಸಿಕ ವ್ಯಕ್ತಿಗಳಾಗಿದ್ದಂತೆ ಕಂಡುಬರುತ್ತದೆ. ಚೌಡಿಕೆಯವರು ಮತ್ತು ಗೊಂದಲಿಗರು ಒಂದೇ ಮೂಲದ ಭಿನ್ನ ಕವಲುಗಳಂತೆ ತೋರುತ್ತಾರೆ. ಇಬ್ಬರಲ್ಲೂ ಚೌಡಿಕೆ ವಾದ್ಯ ಕಾಣಿಸಿಕೊಳ್ಳುವುದು, ಜಮದಗ್ನಿ-ರೇಣುಕೆಯರ ಕಥೆ ಸಾಮಾನ್ಯವಾಗಿ ಬರುವುದು ಇದಕ್ಕೆ ಕಾರಣವಾಗಿದೆ. ಈ ಎರಡು ಸಂಪ್ರದಾಯಗಳೂ ಉತ್ತರ ಕರ್ನಾಟಕದಲ್ಲಿ ಮೊದಲು ಪ್ರಚುರವಿದ್ದು, ಆಮೇಲೆ ದಕ್ಷಿಣ ಕರ್ನಾಟಕದ ಕಡೆಗೆ ಬಂದಿರಬೇಕೆಂದು ಊಹಿಸಬಹುದಾಗಿದೆ. ಜುಂಜಪ್ಪನ ಕಥೆ ಸಮಗ್ರವಾಗಿ ತ್ರಿಪದಿಯಲ್ಲಿ ಸಾಗುವುದು ಒಂದು ವೈಶಿಷ್ಟ್ಯ, ಗಣೆಯ ನಾದ ಇದನ್ನು ಮತ್ತಷ್ಟು ಮುರತರವನ್ನಾಗಿ ಮಾಡುತ್ತದೆ. ಜನಪದ ಕಥೆಯನ್ನು ಕಥೆ ಮಾಡುವ ತಮ್ಮ ಸಂಪ್ರದಾಯಕ್ಕೆ ಅಳವಡಿಸಿಕೊಳ್ಳುವ ರೀತಿ ಜೋಳಿಗೇರು, ಗೊಂದಲಿಗರು ಮತ್ತು ಕರಪಾಲದವರಲ್ಲಿ ಏಕಪ್ರಕಾರವಾಗಿ ಕಾಣಿಸಿಕೊಳ್ಳುವುದು ಒಂದು ಗಮನಾರ್ಹ ಸಂಗತಿ. ತಂಬೂರಿಯ ಶ್ರುತಿಯ ಹಿನ್ನಲೆಯಲ್ಲಿ ಕಥೆಯನ್ನು ಹಾಡುವುದರಿಂದ ತಂಬೂರಿಯವರೆಂದು ಹೆಸರಿದೆ. ಕಿನ್ನರಿಯನ್ನು ನುಡಿಸಿ ಜೋಗಿಗಳು, ಗಂಟೆಯನ್ನು ಬಾರಿಸಿ ಹೆಳವರು ಹಾಡುವ ಕಾವ್ಯಗಳು ಅಷ್ಟೇ ಸ್ವಾರಸ್ಯವಾಗಿವೆ. ಈ ಎಲ್ಲ ಸಂಪ್ರದಾಯಗಳ ಸಾಹಿತ್ಯವೂ ಸಮಗ್ರವಾಗಿ ಸಂಗ್ರಹಗೊಂಡಾಗ ಕನ್ನಡ ಜನಪದ ಸಾಹಿತ್ಯದ ವಿಸ್ತಾರ, ವೈಭವ, ಸಮೃದ್ಧಿಗಳು ಗೋಚಾರವಾಗುತ್ತವೆ.

	ಜನಪದ ಸಾಹಿತ್ಯದಲ್ಲಿ ಹೆಚ್ಚು ವ್ಯಾಪಕವಾಗಿ ಕಾಣಿಸಿಕೊಳ್ಳುವ ಗಾದೆ ಜನಪದದ ಜೀವನಾಡಿಯಾಗಿದೆ. ಜನಸಾಮಾನ್ಯರು ಜೀವನದ ನಾನಾಭಾಗಗಳಲ್ಲಿ ತಮಗಿರುವ ಜ್ಞಾನಾನುಭವದ ಜೊತೆಗೆ, ಅದನ್ನು ತಮ್ಮ ವಿವೇಕದ ಒರೆಗಲ್ಲಿಗೆ ಹಚ್ಚಿನೋಡುವ ತೀಕ್ಷಣತೆಯ ಅನುಭವ ನಮಗಿಲ್ಲಿ ಆಗುತ್ತದೆ. ಸಮಾಜದಲ್ಲಿ ನಡೆಯುತ್ತಿದ್ದ ಅನ್ಯಾಯ, ಅಧರ್ಮ, ವಂಚನೆ, ಮೋಸ, ಡಾಂಭಿಕತೆ, ಕೀಳುಮೇಲುಗಳು ಮುಂತಾದವನ್ನು ಕಂಡು ಜನಪದ ಕಣ್ಮುಚ್ಚಿ ಕುಳಿತಿರಲಿಲ್ಲ. ಅದನ್ನು ಅಷ್ಟೇ ಧೈರ್ಯವಾಗಿ ಎದುರಿಸಿದ್ದರು. ಪ್ರಬಲವಾಗಿ ವಿರೋಧಿಸಿದ್ದರು. ಸಾಧ್ಯವಿಲ್ಲವೆಂದಾಗ ಮಾರ್ಮಿಕವಾದ ಮಾತಿನ ಮೂಲಕ ಪ್ರತಿಭಟಿಸಿದ್ದರು. ಈ ತರಹದ ಗಾದೆಗಳಲ್ಲಿ ಕೆಚ್ಚಿದೆಯಾದರೂ ಕಿಚ್ಚಿಲ್ಲ. ಬೆಳಕಿದೆಯಾದರೂ ಬೆಂಕಿಯಿಲ್ಲ. ಈ ಪ್ರತಿಯೊಂದು ಮಾತಿನ ಹಿಂದೆಯೂ ಜೀವವೊಂದು ಅನುಭವಿಸಿದ ಅಪಾರ ದುಃಖವಿದೆ. ಹೃದಯವನ್ನು ತಿದ್ದುವ ಕೈಂಕರ್ಯವಿದೆ. ಇಂಥ ಗಾದೆಗಳಲ್ಲಿ ಸಾಮಾಜಿಕ ಪ್ರಜ್ಞೆ ವ್ಯಕ್ತವಾಗಿದೆ. ಸಮಾಜದ ಕುಂದುಕೊರತೆಗಳನ್ನು ಪರಿಚಯಿಸುವ ಈ ಗಾದೆಗಳಲ್ಲಿ ನೀತಿ ಇದೆ. ಸಾಹಿತ್ಯವಿದೆ.	
ಮಾನವಕುಲದ ಹಲವಾರು ಸಮಸ್ಯೆಗೆ ದ್ಯೋತಕಗಳಾಗಿ ಗಾದೆಗಳು ಕಾಣಿಸಿಕೊಳ್ಳುತ್ತವೆ. ಸರಳವೂ ಸಾಕ್ಷೀಭೂತವೂ ಆದ ಹೋಲಿಕೆಗಳಿಂದ ಚಿತ್ರಿಸಿರುವುದು ಇವುಗಳಲ್ಲಿನ ಸಾಹಿತ್ಯಿಕ ಮೌಲ್ಯವನ್ನು ದೃಢಪಡಿಸುತ್ತದೆ. ಗಾದೆಗಳ ಮಾಸದ ಹೆಸರಿಗೆ ಅವುಗಳಲ್ಲಿರುವ ಸರಳಸಾಮಾನ್ಯ ಕೌಟುಂಬಿಕ ರೂಪಕಗಳೂ ಕಾರಣವಾಗಿವೆ. ಗಾದೆಗಳ ಸಾಹಿತ್ಯಿಕ ಬೆಲೆ ಇವುಗಳಿಂದ ಹೆಚ್ಚಿದೆ ಎನ್ನಬೇಕು. ಪ್ರತಿಯೊಂದು ಗಾದೆಯೂ ಒಂದಲ್ಲ ಒಂದು ರೀತಿಯಿಂದ ಇಂಥ ಸಂಸಾರ ಶಿಲ್ಪವಾಗಿದೆ. ಗಾದೆಯ ಸೃಷ್ಟಿಕರ್ತನಿಗೆ ಸಣ್ಣ ಸಣ್ಣ ಪ್ರಕ್ರಿಯೆಗಳೂ ಹೊರತಾಗುವುದಿಲ್ಲ. ಪ್ರಾಣಿ ಪ್ರಪಂಚದ ಕಿರುಘಟನೆಯೊಂದನ್ನು ಮನುಷ್ಯಪ್ರಪಂಚಕ್ಕೆ ಸಾಂಕೇತಿಕವಾಗಿ ಬಳಸಿಕೊಂಡಿರುವುದನ್ನು ಸಗಣೀಲಿ ಸಾವಿರ ಹುಳ ಇದ್ದರೂ ಸಂಜೆ ಹೊತ್ತಿಗೆ ಮರಣ ಎಂಬುದರಲ್ಲಿ ನೋಡಬಹುದು.

	ನಿಲುಕದ ವಸ್ತುವಿಗೆ ಕೈಚಾಚದೆ, ಸುತ್ತುಮುತ್ತಲ ಸಾಮಗ್ರಿಯನ್ನೇ ದೃಷ್ಟಾಂತ ರೂಪಕಗಳನ್ನಾಗಿ ಅಳವಡಿಸಿಕೊಂಡಿರುವುದು ಅನುಭವದ ಪ್ರಾಮಾಣಿಕತೆಗೆ, ಕಾವ್ಯ ಕಲೆಯ ಸೂಕ್ಷ್ಮದೃಷ್ಟಿಗೆ ನಿಚ್ಚಳವಾದ ಸಾಕ್ಷಿಯಾಗಿದೆ. ಈ ಒಂದೊಂದು ಗಾದೆಯಲ್ಲೂ ವಾಸ್ತವತೆ ಇದೆ, ಮಣ್ಣಿನ ವಾಸನೆ ಘಂ ಎನ್ನುತ್ತದೆ. ಸಾಹಿತ್ಯದ ಮೌಲ್ಯ ವಿವೇಚನೆಗೆ ರೂಪಾಕಾದಿ ಪರಿಕರಗಳು ಮೂಲಮಾನವಾಗುವುದಾದರೆ, ಇಂಥ ಹಲವಾರು ಗಾದೆಗಳು ಉತ್ತಮ ಸಾಹಿತ್ಯಿಕ ಲಕ್ಷಣಗಳಿಂದ ಕೂಡಿರುವುದನ್ನು ಕಾಣುತ್ತೇವೆ.

	ವಿಡಂಬನೆ ಮತ್ತು ಹಾಸ್ಯ ಗಾದೆಯ ಮತ್ತೆರಡು ವಿಷಯಗಳು. ಇವು ಹಾಸು ಹೊಕ್ಕಾಗಿ ಸೇರಿರಬಹುದು ಅಥವಾ ಪ್ರತ್ಯೇಕವಾಗಿ ವ್ಯಕ್ತವಾಗಬಹುದು. ಭಾಷೆಯ ಮೊನಚು ಮತ್ತು ಭಾವದ ಬನಿ ಇವುಗಳಲ್ಲಿ ಗೋಚರಿಸುವ ಎರಡು ಅಂಶಗಳು ; ದುಡುವಂತೆ ಧೂಪ ಹಾಕಿದ್ರೆ. ಗುಡಿ ಕಲ್ಲೆಲ್ಲ ದಡಾರ್ ಅಂದೋ, ಚಿತ್ರ ಸೃಷ್ಟಿಯನ್ನು ಒಂದು ಕಡೆ ಕಂಡರೆ, ಭಾವ ಭಾಷೆಗಳ ಮಿಲನವನ್ನು ಮತ್ತೊಂದು ಕಡೆ ಕಾಣುತ್ತೇವೆ. ಗಾದೆಯ ಆಕರ್ಷಕ ಮಾಟಕ್ಕೆ ಸರಳತೆ ಸೆರೆ ಹಿಡಿಯಬಲ್ಲ ಗುಣವಾದಂತೆ, ಆದರೆ ಹಾಸ್ಯ ಪ್ರವೃತ್ತಿ ಉಳಿಯದೆ, ಗಂಭೀರ ಜ್ಞಾನದ ಪಾದರಸವಾಗಿ ಪರಿಣಮಿಸುತ್ತದೆ.

	ಗಾದೆಯ ಭಾಷೆ ದೈನಂದಿನ ವ್ಯವಹಾರಗಳಲ್ಲಿ ಉಪಯೋಗಿಸುವ ಇತರ ಸಾಧಾರಣ ಮಾತಿನಂತಿರದೆ, ಅದರ ಸರ್ವಲಕ್ಷಣಗಳನ್ನೂ ಸ್ವೀಕರಿಸಿ ಅದಕ್ಕಿಂತ ಎತ್ತರದ ಸ್ಥಾನದಲ್ಲಿ ನಿಂತ ಸಾಮಾನ್ಯನ ಕಾವ್ಯಭಾಷೆಯಾಗುತ್ತದೆ. ನಾಗರಿಕ ಭಾಷಾ ಜಗತ್ತಿನಲ್ಲಿ ಕಾಣದ ಬಳಸದ ಎಷ್ಟೋ ಅಪೂರ್ವ ಪದಗಳು ಇನ್ನೂ ಜೀವಂತವಿದೆ ಎಂಬುದಕ್ಕೆ ಗಾದೆಗಳು ಸಾಕ್ಷಿಯಾಗಿವೆ. ಗಾದೆಯ ಭಾಷೆಯ ಎರಡು ಪ್ರಧಾನ ಗುಣಗಳು ; ಧ್ವನಿಯ ಮೂಲಕ ಶಕ್ತಿಯನ್ನು ಹೊರೆಯುವುದು ; ಸಂಭಾಷಣೆಯ ಮೂಲಕ ವೈವಿಧ್ಯವನ್ನು ಸಾಧಿಸುವುದು ಪೌರಾಣಿಕ ಪ್ರತಿಮೆಗಳನ್ನು ಕೊಡುವುದರ ಮುಖಾಂತರ ಗಾದೆಯ ಭಾಷಾ ಶೈಲಿಗೆ ನಿತಾಂತ ಶಕ್ತಿಯೊಂದು ಲಭಿಸುತ್ತದೆ ಎನ್ನುವುದಕ್ಕೆ ಹೊಟ್ಟೆಕಿಚ್ಚಿಗೆ ಎದೆ ಹಿಡಕೊಂಡ್ಲು ಗಾಂಧಾರಿ ಗರ್ಭ ಗುದ್ದಿದ್ದಂಗೆ- ಎಂಬ ಗಾದೆ ಉತ್ತಮ ನಿದರ್ಶನವಾಗುತ್ತದೆ.

	ಯಾವುದೇ ಉತ್ತಮ ಕಾವ್ಯದ ಹಿರಿಮೆಗೆ ರೂಪಕ ಕಾರಣವಾಗುತ್ತದೆ. ಇದನ್ನು ಸಮರ್ಪಕವಾಗಿ ಬಳಸಿಕೊಂಡಿರುವ ಒಗಟು ಕೂಡ ಕಾವ್ಯಕಲೆಗಳಲ್ಲಿ ಒಂದಾಗಿದೆ. ಅದು ಕೇವಲ ಚಮತ್ಕಾರಯುತವಾದ ವಾಗಾಡಂಬರವಾಗಿರದೆ, ಹೇಳಬೇಕಾಗಿರುವ ವಸ್ತುವೊಂದನ್ನು ಹೋಲಿಕೆಯ ಮೂಲಕ ಅರ್ಥಪೂರ್ಣವಾಗಿ ಧ್ವನಿಸುವಂಥದ್ದಾಗಿರುತ್ತದೆ. ಆದ್ದರಿಂದ ರೂಪಕವನ್ನಷ್ಟೇ ಪರಿಭಾವಿಸಿದರೂ ರಸಾನುಭವವಾಗದಿರದು. ಇನ್ನು ಅದರ ಅಂತರಾರ್ಥ ತೆರೆದ ಮೇಲೆ ಅನಾಮಧೇಯವಾದ ಜನಪದ ಬೆಡಗಿನ ಕವಿಯ ಕೌಶಲಕ್ಕೆ ಬೆರಗಾಗುತ್ತೇವೆ.

	ಅಕ್ಕ ತೌರಿಗೆ ಹೋಗುವಾಗ ಸರ್ರನೆ ಹೋಗ್ತಾಳೆ ; ಗಂಡನ ಮನೆಗೆ ಬರುವಾಗ ಹೆಜ್ಜೆಹೆಜ್ಜೆಗು ಕಣ್ಣೀರು ಸುರಿಸುತ್ತಾ ನಿಧಾನವಾಗಿ ಬರ್ತಾಳೆ.	

ಇದೊಂದು ಹೃದಯಂಗಮವಾದ ಒಗಟು. ಜನಪದ ಸಾಹಿತ್ಯವೆಲ್ಲ ಸಂಸಾರ ಸಂಹಿತೆಯೆಂಬ ಮಾತಿಗೆ ಇದೊಂದು ಉದಾಹರಣೆ. ತೌರಿಗೂ ಹೆಣ್ಣಿಗೂ ಇರುವ ಅವಿಭಾಜ್ಯ ಸಂಬಂಧವನ್ನು ಜನಪದ ಕವಿ ಎಂದಿಗೂ ಮರೆಯಲಾರ. ಹುಟ್ಟಿದ ತೌರಿಗೂ ಕೊಟ್ಟ ಗಂಡನ ಮನೆಗೂ ಹುಲ್ಲು ತಾರದೆ ಹೂವು ತರುವಂತೆ ಬಾಳಬೇಕಾಗುತ್ತದೆ. ಹೆಣ್ಣು, ತೌರನ್ನು ಅಗಲಿ ಗಂಡನ ಮನೆಯಲ್ಲಿರಬೇಕಾದ ಹೆಣ್ಣಿಗೆ ತೌರು ಒಂದು ಅಚ್ಚಳಿಯದ ನೆನಪು. ಹೀಗೆ ಬಹಳ ಕಾಲ ಅಗಲಿಕೆಯಿಂದ ಪರಿತಪಿಸಿದ್ದ ಹೆಣ್ಣಿಗೆ ತೌರಿಗೆ ಹೋಗುವ ಅವಕಾಶ ಒದಗಿ ಬಂದಾಗ ಅವಳಿಗಾಗುವ ಸಂತೋಷ ಆತುರಕಾತರಗಳು ಅಷ್ಟಿಷ್ಟಲ್ಲ. ಆದರೆ ತೌರಿನಲ್ಲಿ ಉಳಿಯಲು ಸಾಧ್ಯವೇ? ಮತ್ತೆ ಗಂಡನ ಮನೆಗೆ ಬರುವಾಗ ಮೈಯೆ ಭಾರ ಮನ ಭಾರವಾಗಿ ಮೊದಲಿನ ಆತುರಕಾತರಗಳು ಕಾಣಬರುವುದಿಲ್ಲ. ಹೆಣ್ಣಿನ ಬಾಳನ್ನು ಸಹಾನುಭೂತಿಯಿಂದ ನೋಡಬಲ್ಲ ಯಾರಿಗೂ ಇದು ವೇದ್ಯವಾದ ಸಂಗತಿ. ಈ ವಿಷಯ ಮೇಲಿನ ಒಗಟಿನಲ್ಲಿ ರೂಪಕ ರೂಪವನ್ನು ತಾಳಿದೆ. ಆದರೆ ಒಗಟು ಇಲ್ಲಿಗೆ ನಿಲ್ಲುವುದಿಲ್ಲ. ಅದು ಅರ್ಥಾಪೇಕ್ಷಿಯಾದುದು. ಈ ಒಗಟಿನ ನಿಜವಾದ ಅರ್ಥ ಬಾವಿಯಿಂದ ನೀರು ಸೇದುವ ಕ್ರಿಯೆ. ಖಾಲಿ ಬಿಂದಿಗೆಯನ್ನು ಬಾವಿಗೆ ಬಿಟ್ಟಾಗ ಅನಿವಾರ್ಯವಾಗಿಯೇ ವೇಗವಾಗಿ ಹೋಗುತ್ತದೆ. ಆದರೆ ನೀರು ತುಂಬಿಕೊಂಡ ಬಿಂದಿಗೆ ಸೇದಿದ ಹಾಗೆಲ್ಲ ನೀರನ್ನು ಚೆಲ್ಲುತ್ತ ನಿಧಾನವಾಗಿ ಬರುತ್ತದೆ. ಖಾಲಿ ಬಿಂದಿಗೆಗೆ ತೌರಿಗೆ ಹೋಗುವ ಹೆಣ್ಣಿನ ಚಿತ್ರವೂ ನೀರು ತುಂಬಿಕೊಂಡು ಮೇಲೇರುತ್ತ ಬಂದ ಬಿಂದಿಗೆಗೆ ತೌರಿನ ಭಾವನೆಗಳನ್ನು ಹೊತ್ತ ಭಾರ ಹೃದಯದ ಹೆಣ್ಣಿನ ಚಿತ್ರವೂ ಹೋಲಿಕೆಯಾಗಿದೆ. ತೌರಿಗೆ ಹೋಗುವಾಗಿನ ಶೂನ್ಯಹೃದಯದ ಹೆಣ್ಣು ಬರುವಾಗ ಚೈತನ್ಯವನ್ನು ತುಂಬಿಕೊಂಡು ಬಂದಳು ಎಂಬುದನ್ನೂ ಇದು ಧ್ವನಿಸುತ್ತದೆ. ಜನಪದ ಪ್ರತಿಭೆಗೆ ಇದೊಂದು ಜಲ್ವಂತ ನಿದರ್ಶನ. ಹೋಲಿಕೆಗಾಗಿ ಈ ಕವಿ ವಸ್ತುವನ್ನು ಹುಡುಕಬೇಕಾಗಿಲ್ಲ. ಪರಿಚಿತವಿರುವ ವಸ್ತುವನ್ನು ಎಷ್ಟು ಸಮರ್ಪಕವಾಗಿ ಹಾಗೂ ಸಮರ್ಥವಾಗಿ ಬಳಸಿಕೊಳ್ಳಬಲ್ಲನೆಂಬುದಕ್ಕೂ ಇದು ಸಾಕ್ಷಿಯಾಗಿದೆ. ಹೀಗೆ ಇಲ್ಲಿ ರೂಪಕ ಒಗಟಿನ ಕಲಾಮಾಧ್ಯಮವಾಗಿದೆ. ರೂಪವೇ ಇಲ್ಲಿನ ಭಾಷೆ, ಧ್ವನಿ ಎಲ್ಲವೂ. ಒಗಟಿಗೆ ಹೆಚ್ಚು ಶಕ್ತಿಯನ್ನೂ ಆಕರ್ಷಣೆಯನ್ನೂ ತಂದಿರುವುದೆಂದರೆ ಈ ರೂಪಕವೇ ಆಗಿದೆ. 

	ಸಮೂಹವೊಂದು ಎಷ್ಟೇ ಪುರಾತನವಾದುದಾಗಿರಲಿ ಮತ್ತು ಸರಳವಾದುದಾಗಿರಲಿ, ಅದು ಕೆಲಮಟ್ಟಿನ ಜನಪದ ಸಾಹಿತ್ಯವನ್ನು ಹೊಂದೇ ಇರುತ್ತದೆ. ಈ ದೃಷ್ಟಿಯಿಂದ ಒಂದೇ ವಿಧದ ಕಥೆ, ಗೀತೆ, ಗಾದೆ, ಒಗಟುಗಳು ಎಲ್ಲೆಡೆಯಲ್ಲಿಯೂ ದೊರೆಯುತ್ತಿದ್ದು, ಜನಪದ ಸಾಹಿತ್ಯ ಅನಕ್ಷರಸ್ಥ ಮತ್ತು ಅಕ್ಷರಸ್ಥ ಸಮಾಜಗಳ ನಡುವೆ ಸೇತುಗಟ್ಟುತ್ತದೆಂದು ಹೇಳಬಹುದಾಗಿದೆ. 
(ಆರ್.ಜಿ)